ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಂಜನೇಯ ಸ್ವಾಮಿಯು ಮಹಾದೇವನ ಅವತಾರ, ಅಷ್ಟ ಸಿದ್ಧಿ ಮತ್ತು ನವ ನಿಧಿಯನ್ನು ಹೊಂದಿರುವವನು. ಶಾಶ್ವತವಾದ ಶಕ್ತಿ, ನಿಷ್ಠೆ ಮತ್ತು ಭಕ್ತಿಯನ್ನು ಹೊಂದುತ್ತಾ ಶ್ರೀ ರಾಮನನ್ನು ಒಲಿಸಿಕೊಂಡವನು. ನಾವೆಲ್ಲರೂ ಹನುಮ ಜಯಂತಿಯನ್ನು ಯಾವುದೇ ಜಾತಿ-ಮತ-ಪಂಥಗಳ ಬೇಧವಿಲ್ಲದೇ ಶ್ರದ್ಧೆ, ಭಕ್ತಿ-ಭಾವ ಮತ್ತು ಸಾಮರಸ್ಯತೆಯಿಂದ ಆಚರಿಸೋಣ ಎಂದು ಹಿರಿಯ ಹಿಂತಕ ದ್ರುವ ಕುಲಕರ್ಣಿ ಹೇಳಿದರು.
ನಗರದ ಅಥಣಿ ರಸ್ತೆಯಲ್ಲಿರುವ ಎನ್.ಜಿ.ಓ ಕಾಲನಿಯಲ್ಲಿ ಜೈ ಶ್ರೀ ಹನುಮಾನ ಮಂದಿರದಲ್ಲಿ ಆಯೋಜಿಸಿದ್ದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಜೀವನ ನಿರ್ವಹಣೆ, ಮತ್ತು ಸಂಸಾರ ನೌಕೆಯನ್ನು ನಡೆಸುವಲ್ಲಿಯೇ ತಮ್ಮ ಜೀವನ ಸಾಗಿಸುತ್ತಿರುವ ಮನೆ ಹಿರಿಯರು, ಮಹಿಳೆಯರು, ಮಕ್ಕಳ ಮನದಲ್ಲಿ ಕೀರ್ತನೆ, ಹರಿಕಥೆ, ಮಹಾಭಾರತ, ರಾಮಾಯಣದ ಧಾರ್ಮಿಕ ಮತ್ತು ಸಾಂಸ್ಕೃತಿಕ-ಸಂಸ್ಕಾರ, ನಡೆ-ನುಡಿ, ಆಚಾರ-ವಿಚಾರ ಮತ್ತು ಮೌಲ್ವಿಕ ವೈಚಾರಿಕ ವಿಷಯಗಳ ಬಗೆಗೆ ಅರಿವು ಮೂಡಿಸಬೇಕಾಗಿದೆ ಎಂದರು. ಬಿ.ಎಲ್..ಡಿ.ಇ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ. ಜ್ಯೋತಿ ಖೊದ್ನಾಪೂರ ಮಾತನಾಡಿ, ಅಧ್ಯಾತ್ಮ ಮತ್ತು ವಿಜ್ಞಾನ ಎರಡು ಒಂದೇ ನಾಣ್ಯದ ಮುಖಗಳಿದ್ದಂತೆ. ನಮ್ಮ ಋಷಿ ಮುನಿಗಳು, ಮತ್ತು ಹಿರಿಯರು ಧ್ಯಾನ, ತಪ್ಪಸ್ಸು, ಯೋಗದ ಮಹತ್ವದ ಬಗ್ಗೆ ನಮಗೆ ಪರಿಚಯಿಸಿದ್ದಾರೆ. ನಮ್ಮ ಬದುಕು ಸುಖಮಯ ಮತ್ತು ಸುಂದರವಾಗಬೇಕಾದರೆ ನಮ್ಮಲ್ಲಿ ಇತರರಿಗೆ ಸದಾ ಒಳ್ಳೆಯದನ್ನೇ ಮಾಡುವ ಮನಸ್ಥಿತಿ ಒಡಮೂಡಬೇಕು ಎಂದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಎಂ.ಆರ್.ಪಾಟೀಲ, ಪ್ರೊ. ಎಂ.ಎಸ್.ಖೊದ್ನಾಪೂರ, ಎಸ್.ಜಿ. ನಿಂಗನಗೌಡ್ರ, ವೆಂಕಟೇಶ ಹೊಸಮನಿ, ಬಿ.ಆರ್.ಬಿರಾದಾರ, ಆರ್.ಬಿ.ಕುಮಟಗಿ, ಸುರೇಶ ಹಲಕುಡೆ, ಆರ್.ಎಸ್.ಕೋಷ್ಠಿ, ಲಕ್ಷ್ಮಣ ಶಿಂಧೆ ಇನ್ನಿತರರು ಉಪಸ್ಥಿತರಿದ್ದರು.

