ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ವಿಠ್ಠಲ ಮಂದಿರದಲ್ಲಿ ಚಿದಂಬರ ಸೇವಾ ಸಮಿತಿಯಿಂದ ಹನುಮಾನ ಜಯಂತಿಯನ್ನು ಭಕ್ತಿ ಭಾವದೊಂದಿಗೆ ಆಚರಿಸಲಾಯಿತು.
ಬುಧವಾರ ಬೆಳಿಗ್ಗೆ ಹನುಮಾನ ಜಯಂತಿ ನಿಮಿತ್ಯ ಚಿದಂಬರ ಸೇವಾ ಸಮಿತಿಯ ಪದಾಧಿಕಾರಿಗಳು ಸೇರಿ ವಿವಿಧ ಹೂವು, ಹಾರ, ತಳಿರು ತೋರಣಗಳಿಂದ ಸಿಂಗರಿಸಿ ಹನುಮಾನ ಜಯಂತಿಗೆ ಚಾಲನೆ ನೀಡಿದರು. ಶ್ರೀಪಾದಭಟ್ ಹಾಗೂ ಅಶೋಕಭಟ್ ಜೋಷಿ ನೇತೃತ್ವದಲ್ಲಿ ಪಂಚಾಮೃತದೊಂದಿಗೆ ಅಭಿಷೇಕಗೈದು, ಅಷ್ಟೋತ್ತರ ಸಹಿತ ಎಲ್ಲ ವಿಧಿವಿಧಾನಗಳನ್ನು ಶಾಸ್ತೋಕ್ತವಾಗಿ ನೆರವೇರಿಸಿ ಭಕ್ತಿ ಸಮರ್ಪಿಸಲಾಯಿತು. ತದನಂತರ ಮಹಿಳೆಯರೆಲ್ಲ ಸೇರಿ ಬಾಲ ಹನುಮನ ಕುರಿತಾದ ಭಕ್ತಿಗೀತೆಗಳ ಗಾಯನದ ಮೂಲಕ ತೊಟ್ಟಿಲೋತ್ಸವ ನೆರವೇರಿಸಿದರು. ನಂತರ ಅಭಿಷೇಕ, ಪಾನಕ, ಕೋಸಂಬರಿ ವಿತರಣೆ ಕಾರ್ಯಕ್ರಮ ಜರುಗಿತು. ಆನಂತರ ಬಂದ ಭಕ್ತಾದಿಗಳಿಗೆಲ್ಲ ಮಹಾಪ್ರಸಾದ ವಿತರಿಸಲಾಯಿತು.
ಸಮಿತಿ ಅಧ್ಯಕ್ಷ ನರೇಂದ್ರ ನಾಡಗೌಡ, ಉಪಾಧ್ಯಕ್ಷ ವೆಂಕಟೇಶ ಕುಲಕರ್ಣಿ, ಪಾಂಡುರಂಗ ದೇಶಪಾಂಡೆ, ಚಿದಂಬರ ಕುಲಕರ್ಣಿ, ಗುರುರಾಜ ಕುಲಕರ್ಣಿ, ಪ್ರಮೋದ ನಾಡಗೌಡ, ಶರತ ನಾಡಗೌಡ, ದತ್ತಾತ್ರೇಯ ದೇಶಪಾಂಡೆ, ಶ್ರೀನಿವಾಸ ಕುಲಕರ್ಣಿ, ಆನಂದ ನಾಡಗೌಡ, ಶ್ರೀನಿವಾಸ ಪಾಟೀಲ, ಶ್ರೀಧರ ನಾಡಗೌಡ, ಸಹಿತ ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.

