ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಮುಳವಾಡ ಏತ ನೀರಾವರಿ ವೃತ್ತ ಟಕ್ಕಳಕಿ ಅಡಿ ಬರುವ ಕಾಲುವೆ ಜಾಲಕ್ಕೆ ೨೦೨೫-೨೬ರ ಹಿಂಗಾರು ಹಂಗಾಮಿಗೆ ಕಾಲುವೆ ಜಾಲಕ್ಕೆ ನೀರು ಹರಿಸುವ ಅವಧಿಯನ್ನು ಏ.೧ ರಿಂದ ಏ.೭ರವರೆಗೆ ವಿಸ್ತರಿಸಲಾಗಿದೆ ಎಂದು ಕೆಬಿಜೆಎನ್‌ಎಲ್ ಮುಳವಾಡ ಏತ ನೀರಾವರಿ ಯೋಜನೆಯ ಟಕ್ಕಳಕಿ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
೨೦೨೫-೨೬ನೇ ಸಾಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಮುಳವಾಡ ಏತ ನೀರಾವರಿ ವೃತ್ತ ಟಕ್ಕಳಕಿ ಅಡಿಯಲ್ಲಿ ಬರುವ ಹಂತ-೨ ರ ಪೂರ್ವ ಮತ್ತು ಪಶ್ಚಿಮ ಕಾಲುವೆ, ಸೊನ್ನ ಏತ ನೀರಾವರಿ, ರೊಳ್ಳಿ ಮನ್ನೀಕೇರಿ ಏತ ನೀರಾವರಿ ಮತ್ತು ತೆಗ್ಗಿ ಸಿದ್ದಾಪೂರ ಏತ ನೀರಾವರಿ ಯೋಜನೆಗಳ ಕಾಲುವೆ ಜಾಲಕ್ಕೆ ಹಿಂಗಾರು ಹಂಗಾಮಿಗೆ ದಿನಾಂಕ: ೦೨-೧೨-೨೦೨೫ ರಿಂದ ೦೩-೦೪-೨೦೨೬ ರವರೆಗೆ ೧೪ ದಿನ ಚಾಲೂ ಹಾಗೂ ೧೦ ದಿನ ಬಂದ ಅನುಸರಿಸಿ ಒಟ್ಟು ೧೨೩ ದಿನಗಳವರೆಗೆ ನೀರು ಪೂರೈಸಲು ತೀರ್ಮಾನಿಸಲಾಗಿತ್ತು.
ಈಗ ನೀರಿನ ಲಭ್ಯತೆಯ ಅನುಸಾರ ೨೦೨೫-೨೬ನೇ ಸಾಲಿನ ಹಿಂಗಾರು ಹಂಗಾಮಿಗೆ ನೀರು ಪೂರೈಸುವ ಅವಧಿಯನ್ನು ಏಪ್ರಿಲ್೧ ರಿಂದ ಏಪ್ರಿಲ್.೭ ರವರೆಗೆ ವಿಸ್ತರಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಯೋಜನಾ ವ್ಯಾಪ್ತಿಯ ಕಾಲುವೆಗಳಲ್ಲಿ ಬೆಳೆದು ನಿಂತಿರುವ ಲಘು ನೀರಾವರಿ ಬೆಳೆಗಳನ್ನು ಸಂರಕ್ಷಿಸಲು ಅವಶ್ಯವಿದ್ದಲ್ಲಿ ಮಾತ್ರ ನೀರನ್ನು ಮಿತವಾಗಿ ಬಳಸಬೇಕು ಎಂದವರು ಪ್ರಕಟಣೆಯಲ್ಲಿ ರೈತರಿಗೆ ಮನವಿ ಮಾಡಿದ್ದಾರೆ.
