ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾಲ್ಕು ಕಾರ್ಮಿಕ ಕಾಯಿದೆಗಳ ವಿರುದ್ದ ೨೦೨೫ರ ಏಪ್ರಿಲ್ ಒಂದರಂದು ಕರಾಳ ದಿನ ಆಚರಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಕ್ಷೇತ್ರೀಯ ಮಹಾಸಂಘಗಳು ಮತ್ತು ಸಂಘಗಳ ಜಂಟಿ ವೇದಿಕೆಯವರು ಕರೆ ನೀಡಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮುಂದೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ವತಿಯಿಂದ ಕರಾಳ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಿಐಟಿಯು ಸಂಚಾಲಕರಾದ ಲಕ್ಷ್ಮಣ ಹಂದ್ರಾಳ ಮಾತನಾಡಿ, ಏಪ್ರಿಲ್ ಒಂದರಂದೇ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕಾಗಿ ಕೇಂದ್ರ ನಿಯಮಗಳನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ವ್ಯವಹಾರ ಮಾಡಲು ಸುಲಭತೆ ಎಂಬ ಹೆಸರಿನಲ್ಲಿ ಕಾರ್ಮಿಕ ವಿರೋಧಿ ಮತ್ತು ಮಾಲೀಕರ ಪರವಾದ ಈ ಕಾರ್ಮಿಕ ಸಂಹಿತೆಗಳನ್ನು ಕಾರ್ಮಿಕ ಸಂಘಟನೆಗಳು ನಿರಂತರವಾಗಿ ವಿರೋಧಿಸುತ್ತಿವೆ ಮತ್ತು ಅವನ್ನು ರದ್ದುಪಡಿಸುವಂತೆ ಆಗ್ರಹಿಸುತ್ತಿವೆ. ೨೦೨೬ರ ಫೆಬ್ರವರಿ ೧೨ರಂದು ನಡೆದ ಐತಿಹಾಸಿಕ ಸಾರ್ವತ್ರಿಕ ಮುಷ್ಕರದ ನಂತರವೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಯಾವುದೇ ಗಂಭೀರ ಚರ್ಚೆಗೆ ಮುಂದೆ ಬಂದಿಲ್ಲ ಕೂಡಲೇ ಕಾರ್ಮಿಕ ಕಾಯ್ದೆಯನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸಹ ಸಂಚಾಲಕರಾದ ಅಣ್ಣಾರಾಯ ಈಳಗೇರಿ ಮಾತನಾಡಿ, ಕಾರ್ಮಿಕ ಸಂಹಿತೆಗಳ ರಚನೆಯ ಹಂತದಿಂದಲೂ ಕಾರ್ಮಿಕ ಸಂಘಟನೆಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಭಾರತದ ಕಾರ್ಮಿಕರ ಜೀವನಕ್ಕೆ ಸಂಬಂಧಿಸಿದಂತಹ ಮಹತ್ವದ ವಿಷಯದ ಬಗ್ಗೆ ಚರ್ಚಿಸಲು ಭಾರತೀಯ ಕಾರ್ಮಿಕ ಸಮ್ಮೇಳನವನ್ನೂ ಕರೆದಿಲ್ಲ. ಇದು ಭಾರತವು ಬದ್ಧವಾಗಿರುವ ಅಂತರರಾಷ್ಟ್ರೀಯ ಕಾರ್ಮಿಕ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಸಿಐಟಿಯು ಅಭಿಪ್ರಾಯ ಪಟ್ಟಿದೆ ಎಂದರು.
ಸಹ ಸಂಚಾಲಕ ಸುರೇಶ ಜೀಬಿ ಮಾತನಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಭೀಮರಾಯ ಪೂಜಾರಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
ಸುನಂದಾ ನಾಯಕ, ಸುಮಂಗಲಾ ಆನಂದಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ನಾರಾಯಣ ಬಡಿಗೇರ, ಲಾಲಹ್ಮದ ಶೇಖ, ಚಂದ್ರಶೇಖರ ವಾಲಿಕಾರ, ಎಂ.ಎಸ್.ಕೊಂಡಗೂಳಿ, ಸುರೇಖಾ ವಾಗ್ಮೋರೆ, ಸುವರ್ಣ ಹಲಗಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

