ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಕ್ತದಾನ ಶ್ರೇಷ್ಠದಾನ. ಅದ್ದರಿಂದ ಯುವಕರು ರಕ್ತದಾನ ಮಾಡುವ ಮೂಲಕ ಜೀವಗಳನ್ನು ಉಳಿಸಲು ಸಹಕರಿಸಿ ಎಂದು ಚಾಂದಕವಟೆ ಗ್ರಾಮದ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಗುರುರಾಜಗೌಡ ಪಾಟೀಲ ಹೇಳಿದರು.
ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಆರಾಧ್ಯ ದೈವ ಶ್ರೀ ಬಸವೇಶ್ವರ ಜಾತ್ರಾ ಪ್ರಯುಕ್ತ ಬಸವೇಶ್ವರ ಜಾತ್ರಾ ಕಮೀಟಿ, ಪ್ರಾಥಮಿಕ ಆರೋಗ್ಯ ಕೇಂದ್ರ ಚಾಂದಕವಟೆ, ತಾಲೂಕಾ ಆರೋಗ್ಯ ಇಲಾಖೆ, ಜಿಲ್ಲಾ ರಕ್ತನಿಧಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ ಅಗತ್ಯದ ಮತ್ತು ತುರ್ತುಚಿಕಿತ್ಸೆಯ ಸಮಯದಲ್ಲಿ ರಕ್ತದಾನಿಗಳ ರಕ್ತವನ್ನೇ ರೋಗಿಗಳು ಅವಲಂಬಿಸಿರುತ್ತಾರೆ. ಆದ ಕಾರಣ ಯುವಕರ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಕರೆ ನೀಡಿದರು.
ಈ ವೇಳೆ ಡಾ.ಎ.ಎ.ಮಾಗಿ ಮಾತನಾಡಿ, ಅನಿರೀಕ್ಷಿತ ಅಪಘಾತಗಳು, ತುರ್ತುಶಸ್ತ್ರ ಚಿಕಿತ್ಸೆಗಳ ಸಮಯದಲ್ಲಿ, ಕ್ಯಾನ್ಸರ್ ರೋಗಿಗಳಿಗೆ, ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ಸಮಯದಲ್ಲಿ ರಕ್ತದ ಆವಶ್ಯಕತೆ ಹೆಚ್ಚಾಗಿ ಇರುತ್ತದೆ. ಇದಲ್ಲದೆ ತಲಸ್ಸೇಮಿಯಾ (ಆನುವಂಶಿಕ ನ್ಯೂನತೆ) ಮತ್ತು ಹಿಮೊಫಿಲಿಯಾ (ಕುಸುಮ ರೋಗ) ಇರುವ ವ್ಯಕ್ತಿಗಳಿಗೆ ಜೀವನ ಪರ್ಯಂತ ರಕ್ತದಾನಿಗಳಿಂದ ರಕ್ತದ ಆವಶ್ಯಕತೆ ಇರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಂಗನಗೌಡ ಬಿರಾದಾರ, ಪಂಡಿತ ಚೌಧರಿ, ರಮೇಶಗೌಡ ಬಿರಾದಾರ, ಬಸಲಿಂಗಪ್ಪಗೌಡ ಪಾಟೀಲ, ಶ್ರೀಶೈಲ ಜೋಳದ, ಜಗದೀಶ ಪಾಟೀಲ ವೈದ್ಯಾಧಿಕಾರಿ ಡಾ.ಅಶೋಕ ಚೌಧರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ, ಪಿ.ವಾಯ್.ಚೌಡಕಿ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು, ದೇವಸ್ಥಾನ ಕಮಿಟಿಯ ಸದಸ್ಯರು ಇದ್ದರು.

