ಸಿಂದಗಿ ಬಳಿಯ ಕನ್ನೊಳ್ಳಿ ಟೋಲ್‌ಗೇಟ್ ಬಳಿ ಘೋರ ದುರಂತ | ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು | ಮೃತ ಯುವಕನ ಸೆಲ್ಫಿ ವಿಡಿಯೋದಿಂದ ಆ್ಯಕ್ಸಿಡೆಂಟ್ ಕೇಸ್‌ಗೆ ಮೇಜರ್ ಟ್ವಿಸ್ಟ್
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಸಿಂದಗಿ ಬಳಿ ಮಂಗಳವಾರ ಮಧ್ಯಾಹ್ನ ಮೈ ಜುಂ ಎನ್ನುವಂತಹ ಭೀಕರ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಮತ್ತು ಬೈಕ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದಾಗಿ ಬೈಕ್ ಸವಾರ ಸ್ಥಳದಲ್ಲೇ ಸಜೀವ ದಹನವಾಗಿದ್ದು, ಇಡೀ ಬಸ್ ಅಗ್ನಿಗಾಹುತಿಯಾಗಿದೆ.
ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಬಳಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ನಿವಾಸಿ ಅಭಿಷೇಕ್ ಸಾಹೇಬಗೌಡ ನಾಗರಾಳ (22)
ಎಂಬುವವರೇ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ
ದಹನವಾದ ದುರ್ದೈವಿ.
ಡಿಕ್ಕಿಯ ರಭಸಕ್ಕೆ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದರಿಂದ ಬೈಕ್ ಸವಾರನಿಗೆ ಚೇತರಿಸಿಕೊಳ್ಳಲು ಕಾಲಾವಕಾಶವೇ ಸಿಗಲಿಲ್ಲ. ಘಟನೆಯ ತೀವ್ರತೆಗೆ ಇಡೀ ಬಸ್ ಕ್ಷಣಾರ್ಧದಲ್ಲಿ ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತ್ತು. ಅದೃಷ್ಟವಶಾತ್, ಬೆಂಕಿ ಬಸ್‌ಗೆ
ಆವರಿಸುವ ಮೊದಲೇ ಚಾಲಕನ ಸಮಯಪ್ರಜ್ಞೆ ಹಾಗೂ ಪ್ರಯಾಣಿಕರ ತುರ್ತು ನಿರ್ಗಮನದಿಂದಾಗಿ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಧಾವಿಸಿದ ಸಿಂದಗಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸೆಲ್ಫಿ ವಿಡಿಯೋ: ಆ್ಯಕ್ಸಿಡೆಂಟ್ ಕೇಸ್‌ಗೆ ಮೇಜರ್ ಟ್ವಿಸ್ಟ್..!
ಆರಂಭದಲ್ಲಿ ಇದನ್ನು ಸಹಜ ಅಪಘಾತ ಎಂದುಕೊಳ್ಳಲಾಗಿತ್ತು. ಆದ್ರೆ ಇನ್‌ಸ್ಟಾಗ್ರಾಂ ಪೋಸ್ಟ್ ನಲ್ಲಿ ಸಾವನ್ನಪ್ಪಿದ ಯುವಕ ಹರಿಬಿಟ್ಟಿದ್ದ ವಿಡಿಯೋ ಇಡೀ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಕೊಟ್ಟಿದೆ.
ಅಂದಹಾಗೇ ಇದು ಬರೀ ಸಹಜ ಆಕ್ಸಿಡೆಂಟ್ ಅಲ್ಲ, ಪಕ್ಕಾ ಪ್ಲಾನ್ಡ್ ಸೂಸೈಡ್ ಅನ್ನೋದು ಬಯಲಾಗಿದೆ..
ಲವ್ ಫೆಲ್ಯೂವರ್ ನಿಂದಾಗಿ ಯುವಕ ಬಸ್ ಗೆ ಆಕ್ಸಿಡೆಂಟ್ ಮಾಡಿ ಸೂಸೈಡ್ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಫಿಕ್ಸ್ ಔಟ್ ಆಗಿದೆ. ಆತನ ಇನ್‌ಸ್ಟಾಗ್ರಾಂ ಐಡಿ ಪರಿಶೀಲನೆ ಮಾಡಿದಾಗ ಆಕ್ಸಿಡೆಂಟ್ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದೆ. ಇದೊಂದು ಸಹಜ ಅಪಘಾತ ಅಲ್ಲ, ಪ್ಲ್ಯಾನ್ಡ್ ಸೂಸೈಡ್ ಅನ್ನೋದು.
ಆರಂಭದಲ್ಲಿ ಇದೊಂದು ಆಕ್ಸಿಡೆಂಟ್ ಅಂತಲೆ ಅಂದುಕೊಳ್ಳಲಾಗಿತ್ತು. ಆದ್ರೆ ಅಭಿಷೇಕ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಾನು ಇಂದು ಸೂಸೈಡ್ ಮಾಡಿಕೊಳ್ತಿರೋದಾಗಿ ಸೆಲ್ಪೀ ವಿಡಿಯೋ ಪೋಸ್ಟ್ ಮಾಡಿದ್ದ. ಅವಳನ್ನ ನನ್ನಿಂದ ದೂರ ಮಾಡಿದ್ದಾರೆ. ಅದಕ್ಕಾಗಿ ಸೂಸೈಡ್ ಮಾಡ್ಕೊತಿರೋದಾಗಿ ಹೇಳಿದ್ದಾನೆ. ತನ್ನ ಆತ್ಮಹತ್ಯೆಗೆ ವಿರೇಶ ನಂದೂರ್, ಆತನ ತಾಯಿ ಚೈತ್ರಾ ನಂದೂರ್, ಕೂಡಲ ಸಂಗಮದಲ್ಲಿರೋ ಅವರ ಸಂಬಂಧಿ ನವಿನ್‌ಕುಮಾರ್ ಪಾಟೀಲ್ ಕಾರಣ ಎಂದಿದ್ದಾನೆ. ಹೀಗೆ ಪೋಸ್ಟ್ ಹಾಕಿದ ಕೆಲ ಸಮಯದಲ್ಲಿ ಸಿಂದಗಿಯ ಕನ್ನೊಳ್ಳಿ ಬಳಿ ಈ ಅಪಘಾತ ನಡೆದಿದೆ.. ಇದೊಂದು ಲವ್ ಫೆಲ್ಯುವರ್ ಸೂಸೈಡ್ ಎನ್ನಲಾಗ್ತಿದೆ..
ಇನ್ನು ಅಭಿಷೇಕ ಲವ್ ಫೇಲ್ಯುವರ್ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಮೇಲ್ನೋಟಕ್ಕೆ ಕಂಡು ಬರ್ತಿದೆ. ಆದ್ರೆ ಬಸ್‌ಗೆ ಗುದ್ದಿ ಹೀಗೂ ಸೂಸೈಡ್ ಮಾಡಿಕೊಳ್ತಾರಾ ಅನ್ನೋದೆ ಅಚ್ಚರಿ ಮೂಡಿಸಿದೆ.
ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

