ವಿಜಯಪುರದ ಟಕ್ಕೆಯಲ್ಲಿ ಸರ್ಕಾರಿ ದತ್ತು ಸಂಸ್ಥೆ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವರ್ಷದೊಳಗಿನ ಅನಾಥ ಪ್ರತಿ ಮಗುವನ್ನು ಕೌಟುಂಬಿಕ ಪರಿಸರದಲ್ಲಿ ಬೆಳೆಸಿ ಉತ್ತಮ ಪ್ರಜೆಯಾಗಿಸುವ ನಿಟ್ಟಿನಲ್ಲಿ ದತ್ತು ಪೋಷಕರು, ಏಕಪಾಲಕರು ವಿಶೇಷ ದತ್ತು ಕೇಂದ್ರದ ಮೂಲಕ ಮಗುವನ್ನು ದತ್ತು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ. ಅವರು ಹೇಳಿದರು.
ನಗರದ ಟಕ್ಕೆಯಲ್ಲಿರುವ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ಹೊಸ ಸರ್ಕಾರಿ ದತ್ತು ಸಂಸ್ಥೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿಯ ಅನಾಥ ಹಾಗೂ ಒಪ್ಪಿಸಿದ ಮಕ್ಕಳನ್ನು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-೨೦೧೫ ಹಾಗೂ ದತ್ತು ಮಾರ್ಗಸೂಚಿ-೨೦೧೭ರನ್ವಯ ಕಾನೂನಾತ್ಮಕವಾಗಿ ದತ್ತು ಪಡೆಯಲು ಅವಕಾಶವಿದ್ದು, ಮಕ್ಕಳಿಲ್ಲದವರು, ಇಲ್ಲಿನ ಮಕ್ಕಳನ್ನು ದತ್ತು ಸ್ವೀಕರಿಸಬಹುದಾಗಿದೆ ಎಂದರು.
ಇನ್ನೊಂದೆಡೆ ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳನ್ನು ಸರ್ಕಾರಿ ದತ್ತು ಸಂಸ್ಥೆಯಲ್ಲಿ ದಾಖಲಿಸಬಹುದು. ಮಕ್ಕಳಿಲ್ಲದ ಅಥವಾ ಮಕ್ಕಳನ್ನು ಹೊಂದಿದವರು, ಆಸ್ಪತ್ರೆಯಲ್ಲಿ, ಯಾವುದೇ ಪ್ರದೇಶದಲ್ಲಿ ಬಿಟ್ಟು ಹೋದ ಮಕ್ಕಳನ್ನು ಅಥವಾ ಯಾವುದೇ ಕಾರಣದಿಂದ ಯಾವುದೇ ಪೋಷಕರಿಂದ ಮಗುವನ್ನು ನೇರವಾಗಿ ಪಡೆಯುವುದು ಕಾನೂನು ಪ್ರಕಾರ ಅಪರಾಧವಾಗಿದೆ ಎಂದ ಅವರು, ಅದಕ್ಕೆ ಕಠಿಣ ಶಿಕ್ಷೆಯನ್ನು ನೀಡಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ನಿರೂಪಣಾಧಿಕಾರಿ ನಿರ್ಮಲಾ ಎಚ್. ಸುರಪುರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಎಸ್. ಜಾನಕಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಬಸಮ್ಮ ಹತ್ತರಕಿ, ಬಾಲಕರ ಬಾಲಮಂದಿರ ಕಿರಿಯ ಸಂಸ್ಥೆಯ ಅಧಿಕ್ಷಕಿ ಜಯಶ್ರೀ ಪವಾರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

