ವಿಜಯಪುರ ಜಿಲ್ಲಾಡಳಿತದಿಂದ ಭಗವಾನ ಮಹಾವೀರ ಜಯಂತಿ ಆಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತ್ಯಾಗಕ್ಕೆ ಮತ್ತೊಂದು ಹೆಸರು ಭಗವಾನ್ ಮಹಾವೀರರು. ಅವರು ಈ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಹೇಳಿದರು.
ನಗರದ ಕಂದಗಲ್ ಶ್ರೀ ಹನಮಂತರಾಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾನತೆ, ಜಾತಿ ಪದ್ಧತಿ ನಿರಾಕರಿಸಿ ಎಲ್ಲರೂ ಸಮಾನರು ಎಂದು ಬೋಧಿಸಿದ ಮಹಾನ್ ಪುರುಷ ಭಗವಾನ್ ಮಹಾವೀರರು ಎಂದು ಬಣ್ಣಿಸಿದರು. ಭಗವಾನ್ ಮಹಾವೀರರು ಮನುಕುಲಕ್ಕೆ ಸಾರಿದ ಸತ್ಯ, ಅಹಿಂಸೆಯಂತಹ ಮೌಲ್ವಿಕ ತತ್ವಗಳು ಸಾರ್ವಕಾಲಿಕವಾಗಿದ್ದು, ಅವರ ಸಂದೇಶಗಳನ್ನು ಯುವಕರು ಅರ್ಥೈಸಿಕೊಂಡು ಆದರ್ಶ ಜೀವನ ನಡೆಸಬೇಕೆಂದರು.
ಸಂತರು, ಸತ್ಪುರುಷರು, ದಾರ್ಶನಿಕರ ಜೀವನಾದರ್ಶಗಳು ಹಾಗೂ ಅವರು ನೀಡಿದ ಸಂದೇಶಗಳನ್ನು ಅರಿತುಕೊಳ್ಳುವ ಮೂಲಕ ಯುವಕರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದರು.
ಹೀರಾಚಂದ್ ಗಾಂಧಿ ಉಪನ್ಯಾಸ ನೀಡಿ, ಭಗವಾನ ಮಹಾವೀರರ ಹಲವು ಸಂದೇಶಗಳನ್ನು ಸಾರಿದರು.
ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ ಮಾತನಾಡಿ, ಭಗವಾನ್ ಮಹಾವೀರರ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದರು.
ಶೀತಲ್ ಕುಮಾರ್ ಓಘಿ ಮಾತನಾಡಿ, ಸರ್ಕಾರವು ನಮ್ಮ ಸಮುದಾಯಕ್ಕೆ ನೀಡುತ್ತಿರುವ ಸೌಲಭ್ಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ಪೂಜಾರಿ, ಎಂ.ಎಂ. ವಸ್ತ್ರದ, ಮಣಿಕಂಠ ಶಹಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೋಹನ ಕಟ್ಟಿಮನಿ ಸ್ವಾಗತಿಸಿದರು.
ಕಾರ್ಯಕ್ರಮಕ್ಕೆಮುನ್ನ ಮೆರವಣಿಗೆ
ಬೆಳಿಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಭಗವಾನ ಮಹಾವೀರರ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ನಾನಾ ವಾದ್ಯ ಮೇಳಗಳು ಹಾಗೂ ಕಲಾ ತಂಡಗಳು ಪಾಲ್ಗೊಂಡಿದ್ದವು.

