ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಏಪ್ರಿಲ್ 27 ಮತ್ತು 28 ರಂದು ಸಿಂದಗಿ ನಗರದಲ್ಲಿ ನಡೆಯುವ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆರಕ್ಷಕ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕವಿಗೋಷ್ಠಿ, ವಿಚಾರಗೋಷ್ಠಿ, ಉಪನ್ಯಾಸ, ಸಂಗೀತ, ಜನಪದ, ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಈ ಮೂಲಕ ಪೊಲೀಸರ ವಿವಿಧ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ಮೌಲಾಲಿ ಆಲಗೂರ ಮನವಿ ಮಾಡಿಕೊಂಡರು.
ಬಿಡುವಿಲ್ಲದ ಕರ್ತವ್ಯದ ನಡುವೆಯೂ ಜಿಲ್ಲೆಯ ನೂರಾರು ಆರಕ್ಷಕ ಅಧಿಕಾರಿ ಮತ್ತು ಸಿಬ್ಬಂದಿಗಳು, ಕಥೆ, ಕಾವ್ಯ, ಕಾದಂಬರಿ ಒಳಗೊಂಡ ಸಾಹಿತ್ಯ, ಸಂಗೀತ, ಪ್ರವಚನ, ಜನಪದ, ನೃತ್ಯ, ನಟನೆ, ಸೇರಿದಂತೆ ಹಲವು ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ತಮ್ಮ ಬಿಡುವಿನ ಅವಧಿಯನ್ನು ಕಲಾ ಆರಾಧನೆಗೆ ಅರ್ಪಿಸಿದ್ದಾರೆ. ಆದರೆ ಅವರಿಗೆ ಸೂಕ್ತ ವೇದಿಕೆ ಇಲ್ಲದೆ ಕಲೆಗೆ ಬೆಲೆ ಸಿಗದಂತಾಗಿದೆ. ಆದ್ದರಿಂದ ಏಪ್ರಿಲ್ ಕೊನೆಯ ವಾರದಲ್ಲಿ ಜರುಗುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆರಕ್ಷಕರಿಗೆ ಅವಕಾಶ ನೀಡಿ, ಅವರ ಕಲೆ ಇಮ್ಮಡಿಗೊಳಿಸಬೇಕು.
ಹಂಸಕವಿ ನಾಮದ ಬೀದರ ಜಿಲ್ಲೆ ಹೆಡ್ ಕಾನ್ಸ್‌ಟೇಬಲ್ ಹಣಮಂತರಾಯ ವಲ್ಲೆಪುರ ಇವರನ್ನು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿ ಪೊಲೀಸರ ಸಾಹಿತ್ಯ ಕೃಷಿಯನ್ನು ಪ್ರೋತ್ಸಾಹಿಸಿದ್ದರು. ಅದೇ ರೀತಿ ನಮ್ಮ ಜಿಲ್ಲೆಯೂ ಕೂಡ ಅಕ್ಷರ ಜಾತ್ರೆಯಲ್ಲಿ ಆರಕ್ಷಕರು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಲು ಅವಕಾಶ ನೀಡಿ, ಪ್ರೋತ್ಸಾಹಿಸಬೇಕು. ವಿಜಯಪುರ ಮಕ್ಕಳ ಸಾಹಿತ್ಯದ ತವರು ಎಂದೇ ಖ್ಯಾತಿ ಹೊಂದಿದೆ ಅದಕ್ಕಾಗಿ ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ಮನವಿ ಮಾಡಿದರು.

