ಹಣ ಪಡೆದು ವಿದ್ಯಾರ್ಥಿಗಳಿಗೆ ಇಷ್ಟವಾದ ಕೇಂದ್ರ | ಸಂಭಾಷಣೆ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಬೇಕಾದ ಕೇಂದ್ರಗಳ ವ್ಯವಸ್ಥೆ ಮಾಡಿ ಕೊಡುವುದಾಗಿ ಸುಮಾರು ೩೦ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ, ಅವರು ಕೇಳಿದ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷಾ ದಾಖಲಾತಿ ನೀಡುವ ಭರವಸೆಯನ್ನು ಸಿಂದಗಿ ಸರಕಾರಿ ಆದರ್ಶ ಶಾಲೆಯ ಶಿಕ್ಷಕ ರಮೇಶ ಚಟ್ಟರಕಿ ನೀಡಿದ್ದರು ಎಂಬ ಸಂಭಾಷಣೆ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದೀಗ ಬೆಳಕಿಗೆ ಬಂದಿದೆ.
ಈ ಕುರಿತು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಈ ವಿಷಯದ ಕುರಿತು ವೈರಲ್ ಆಗಿದೆ. ಅದಕ್ಕೆ ಸಂಬಂಧಿಸಿದಂತೆ ಶಿಕ್ಷಕ ರಮೇಶ ಚೆಟ್ಟರಕಿ ಅವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಮತ್ತು ಮೇಲಾಧಿಕಾರಿಗಳ ಆದೇಶದ ಮೇರೆಗೆ ಶಾಲೆಯ ಶಿಕ್ಷಕನ ಈ ಕಾರ್ಯಕ್ಕೆ ಏನು ಮಾಡಿದ್ದಾರೆ ಎಂದು ಮುಖ್ಯೋಪಾಧ್ಯಾಯರಿಗೂ ಒಂದು ನೋಟಿಸ್ ನೀಡಿ ಎಂದು ಹೇಳಿದ ಕಾರಣ ಅವರಿಗೊಂದು ಜಾರಿ ಮಾಡಿಲಾಗಿದೆ. ಮಕ್ಕಳ ಪಾಲಕರು ನನಗೆ ಕರೆ ಮಾಡಿ ಇದರಲ್ಲಿ ಮಕ್ಕಳದ್ದೇ ತಪ್ಪಿದೆ ಎಂದು ಮಕ್ಕಳೇ ಒಪ್ಪಿಕೊಳ್ಳುತ್ತಿದ್ದಾರೆ ಬನ್ನಿ ಎಂದು ಕರೆದರೂ ನಾನು ಹೋಗಿಲ್ಲ. ಅದಕ್ಕೆ ಸಂಬಂಧಿಸಿದಂತೆ ಶಿಕ್ಷಕ ರಮೇಶ ಚೆಟ್ಟರಕಿ ಲಿಖಿತವಾಗಿ ಕಾರಣ ನೀಡಬೇಕು ಎಂದು ತಿಳಸಿದ್ದೇನೆ. ಮಕ್ಕಳು ಯಾವ ಕೇಂದ್ರಕ್ಕೆ ದಾಖಲಾಗುತ್ತಾರೆ ಎಂಬುದು ಪರೀಕ್ಷಾ ಮಂಡಳಿಯ ಕಾರ್ಯ. ನಮಗೂ ಮತ್ತು ಡಿಡಿಪಿಐ ಅವರಿಗೂ ಮಾಹಿತಿ ಇರುವುದಿಲ್ಲ. ಆದರೆ ಪರೀಕ್ಷೆಗೆ ಮುಂಚೆ ಪ್ರವೇಶ ಪತ್ರಗಳು ಶಾಲೆಯ ಲಾಗಿನ್‌ಗೆ ಬರುತ್ತವೆ. ಬಹುಷಃ ಅದನ್ನು ಗಮನಿಸಿ ನಾನೇ ಮಾಡಿಸಿದ್ದೇನೆ ಎಂಬುದಾಗಿ ಹೇಳಿ ದುರುಪಯೋಗ ಪಡಿಸಿಕೊಂಡಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರ ಕುರಿತಾಗಿ ಮೇಲಾಧಿಕಾರಿಗಳ ಆದೇಶದ ಮೇರೆಗೆ ಮಂಗಳವಾರ ೩ಜನರ ತಂಡವೊಂದನ್ನು ರಚಿಸಿ ತನಿಖೆ ಮಾಡಿ ವಿವರವಾದ ವರದಿಯನ್ನು ನೀಡಲಾಗುವುದು ಎಂದರು.


