ಸ್ವಾತಂತ್ರ್ಯ ಸೇನಾನಿ ಪದ್ಮಾವತಿ ವಾಮನರಾವ್ ದೇಸಾಯಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿದ ವಿಶ್ರಾಂತ ಸಂಪಾದಕ ಮನೋಜ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ದೇಶದ ಸ್ವತಂತ್ರ್ಯಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಪದ್ಮಾವತಿ ಬಾಯಿ ಅತ್ಯಂತ ಕಷ್ಟದ ಜೀವನ ನಡೆಸಿದರು. ಗಂಡನ ಮನೆಯ ನೂರಾರು ಎಕರೆ ಭೂಮಿ ಕಳೆದುಕೊಂಡು, ವಿದ್ಯುತ್, ನೀರು, ಶೌಚಾಲಯವಿಲ್ಲದ ಅತ್ಯಂತ ಕಿರಿದಾದ ಕೋಣೆಯಲ್ಲಿ ವಾಸವಿದ್ದು, ತಮ್ಮ ಕೊನೆಯ ಜೀವನ ಕಳೆದರು ಎಂದು ಸ್ವಾತಂತ್ರ್ಯ ಸೇನಾನಿ ಪದ್ಮಾವತಿ ಬಾಯಿ ಅವರ ಮೊಮ್ಮಗ, ವಿಶ್ರಾಂತ ಸಂಪಾದಕ, ಮನೋಜ ಪಾಟೀಲ ಹೇಳಿದರು.
ನಗರದ ಬಸವ ಭವನದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ಸೇನಾನಿ ಪದ್ಮಾವತಿ ವಾಮನರಾವ್ ದೇಸಾಯಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಮಖಂಡಿಯಲ್ಲಿ ಪೇಶ್ವೆಗಳ ಸಂಸ್ಥಾನ ಇದ್ದುದರಿಂದ ಎಲ್ಲ ಕಾಗದ ಪತ್ರಗಳು, ದಾಖಲೆಗಳು ಮಹರಾಷ್ಟ್ರದ ಪುಣೆಯಲ್ಲಿವೆ. ಕರ್ನಾಟಕದಲ್ಲಿ ಪೇಸ್ವೆಗಳ ಆಡಳಿತದ ಯಾವ ದಾಖಲೆಗಳು ಸಿಗುತ್ತಿಲ್ಲ. ಮೊದಲು ಕನ್ನಡಕ್ಕೆ ಪ್ರಾಶಸ್ತ್ರವಿರಲಿಲ್ಲ, ಮರಾಠಿ ಪ್ರಭಾವವಿತ್ತು. ಈಗಲೂ ಪೇಶ್ವಾಯಿ ಸಂಸ್ಥಾನಗಳ ದಾಖಲೆಗಳು ಬೇಕಾದಲ್ಲಿ ಪುಣೆಗೆ ಹೋಗಬೇಕಾದ ಅನಿವಾರ್ಯತೆಯಿದೆ. ದಾಖಲೆಗಳಿಲ್ಲದ ಕಾರಣ ಅನಂತರಾವ ಸಾಬಡೆ, ಮರಣ ಸೇರಿದಂತೆ ಹಲವು ಘಟನೆಗಳು ಇಂದಿಗೂ ನಿಗೂಢವಾಗಿದೆ ಅವುಗಳನ್ನು ಬೆಳಕಿಗೆ ತರಬೇಕಿದೆ ಎಂದು ಹೇಳಿದರು.
ಗ್ರಂಥ ಲೇಖಕ ಡಾ.ತಾತಾಸಾಹೇಬ್ ಬಾಂಗಿ ಮಾತನಾಡಿ, ಪದ್ಮಾವತಿ ಬಾಯಿ ಅವರ ಚರಿತ್ರೆ ಎಲ್ಲ ಭಾಷೆಗಳಿಗೆ ತರ್ಜುಮೆ ಆಗಬೇಕು, ಅವರ ಗೌರವಾರ್ಥ ಪೋಸ್ಟ್ ಸ್ಟ್ಯಾಂಪ್ ಬಿಡುಗಡೆಗೊಳಿಸಬೇಕು ಹಾಗೂ ಪಠ್ಯದಲ್ಲಿ ಅವರ ಚರಿತ್ರೆ ಸೇರಬೇಕು, ಜಮಖಂಡಿಯ ವಿವಿಯಲ್ಲಿ ಅವರ ಹೆಸರಿನ ಪೀಠ ಸ್ಥಾಪನೆ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸಂಶೋಧನೆ ಆಗಬೇಕೆಂಬ ಆಸೆ ಇದೆ ಎಂದು ತಿಳಿಸಿದರು.
ಮಹಿಳಾ ವಿವಿಯ ವಿಶ್ರಾಂತ ಕುಲಪತಿ ಮೀನಾ ಚಂದಾವರಕರ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು. ಬಾಗಲಕೊಟೆಯ ಹಿಂದುಸ್ಥಾನ ಸೇವಾದಳ ಟ್ರಸ್ಟ್‌ನ ವ್ಯವಸ್ಥಾಪಕ ಶ್ರೀನಿವಾಸ ಛಬ್ಬಿ ಮಾತನಾಡಿದರು.
ವಿಮರ್ಶಕ ವೈ.ಎಂ. ಯಾಕೊಳ್ಳಿ ಕೃತಿ ಪರಿಚಯ ಮಾಡಿಕೊಟ್ಟರು.
ಪದ್ಮಾವತಿ ಬಾಯಿ ಅವರ ಕೊನೆಯ ದಿನಗಳಲ್ಲಿ ಅವರಿಗೆ ಸಹಕಾರ ಮಾಡಿದ ಡಾ.ಪ್ರಲ್ಲಾದ ಹುಲ್ಯಾಳಕರ, ಡಾ, ಪ್ರಕಾಶ ಹೊನವಾಡ ಅವರನ್ನು ಸನ್ಮಾನಿಸಲಾಯಿತು. ಸಿದ್ದಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಮಹದೇವ ಬಸರಕೊಡ, ಜಿಲ್ಲಾ ನೋಂದಣಾಧಿಕಾರಿ ಸವಿತಾ ಲಕ್ಷ್ಮೀ, ಸಾಹಿತಿ ಕೆ..ಚನ್ನಪ್ಪ. ವಿಶ್ರಾಂತ ಸುಬೇದಾರ ರಾಮು, ಗೃಹರಕ್ಷಕ ದಳದ ಡಾ.ಎಚ್. ಬಿ. ಚೌಧರಿ, ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಬಸವ ಸಮಿತಿ ಅಧ್ಯಕ್ಷ ಕಾಡುಮಾಳಿ ಇತರರು ಇದ್ದರು. ತಾಲೂಕು ಕಸಾಪ ಅಧ್ಯಕ್ಷ ಸಂತೋಷ ತಳಕೇರಿ ಸ್ವಾಗತಿಸಿದರು. ಪ್ರೊ.ವಿನಾಯಕ ಕುಲಕರ್ಣಿ, ಸರಿತಾ ಶಿರಗುಪ್ಪಿ ನಿರೂಪಿಸಿದರು.

