ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹರಿದ 2 ಟಿಎಂಸಿ ನೀರು | ಶಾಸಕ ಲಕ್ಷ್ಮಣ ಸವದಿ ಭಗೀರಥ ಪ್ರಯತ್ನಕ್ಕೆ ಸಿಕ್ಕ ಫಲ
ಉದಯರಶ್ಮಿ ದಿನಪತ್ರಿಕೆ
ಅಥಣಿ: ತೀವ್ರ ಬೇಸಿಗೆಯ ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಅಥಣಿ ಮತಕ್ಷೇತ್ರದ ಜನತೆ ಹಾಗೂ ರೈತ ಸಮುದಾಯಕ್ಕೆ ಈಗ ಸಮಾಧಾನದ ಸುದ್ದಿ ಸಿಕ್ಕಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಸುಮಾರು 2 ಟಿಎಂಸಿ ನೀರು ಹರಿದು ಬರುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಇತ್ತೀಚೆಗೆ ಪ್ಪರಗಿ ಬ್ಯಾರೇಜ್‌ನ ಗೇಟ್ ಮುರಿದು ನೀರು ಕೆಳಭಾಗಕ್ಕೆ ಹರಿದು ಹೋಗಿದ್ದರಿಂದ, ಅಥಣಿ ಭಾಗದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗುವ ಭೀತಿ ಎದುರಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಅಥಣಿ ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅವರು, ರೈತರ ಮೇಲಿನ ಅಪಾರ ಕಾಳಜಿಯಿಂದ ತಕ್ಷಣ ಕಾರ್ಯಪ್ರವೃತ್ತರಾದರು.
ಮಹಾರಾಷ್ಟ್ರ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಕೃಷ್ಣಾ ನದಿಗೆ ನೀರು ಬಿಡುವಂತೆ ಮನವರಿಕೆ ಮಾಡಿಕೊಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಸವದಿ ಅವರ ಈ ಭಗೀರಥ ಪ್ರಯತ್ನದ ಫಲವಾಗಿ 2 ಟಿಎಂಸಿ ನೀರು ಈಗ ನದಿಗೆ ಹರಿದು ಬರುತ್ತಿದೆ. ಇದರಿಂದ ಈ ಭಾಗದ ನದಿ ತೀರದ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ನೀಗುವುದರ ಜೊತೆಗೆ, ಜಾನುವಾರುಗಳಿಗೂ ಆಸರೆಯಾದಂತಾಗಿದೆ.
ಶಾಸಕರ ಈ ಸಮಯೋಚಿತ ನಿರ್ಧಾರ ಮತ್ತು ರೈತಪರ ಕಾಳಜಿಗೆ ಅಥಣಿ ಮತಕ್ಷೇತ್ರದ ಸಾರ್ವಜನಿಕರಿಂದ ಹಾಗೂ ರೈತ ಸಂಘಟನೆಗಳಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

