ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಸುಶಾಂತ ಚೌಗಲೆ ಸಲಹೆ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ವಿಶ್ವ ಗ್ರಾಹಕರ ದಿನಾಚರಣೆಯನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಆಚರಿಸಲಾಗುತ್ತದೆ ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಸುಶಾಂತ ಚೌಗಲೆ ಹೇಳಿದರು.
ನಗರದ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಗ್ರಾಹಕನು ತನ್ನ ಹಕ್ಕುಗಳನ್ನು ಅರಿತುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದರು. ವ್ಯಾಪಾರ-ವ್ಯವಹಾರಗಳಲ್ಲಿ ಗ್ರಾಹಕರಿಗೆ ಅನ್ಯಾಯವಾಗದಂತೆ ಕಾಯ್ದೆ-ಕಾನೂನುಗಳು ಅವರ ಹಕ್ಕುಗಳನ್ನು ರಕ್ಷಿಸುತ್ತವೆ ಎಂದು ತಿಳಿಸಿದರು.
ಪ್ರತಿಯೊಬ್ಬ ಗ್ರಾಹಕರಿಗೂ ಸಮಾನ ಹಕ್ಕುಗಳಿದ್ದು, ಸರಿಯಾದ ಬೆಲೆಯಲ್ಲಿ ಗುಣಮಟ್ಟದ ವಸ್ತುಗಳು ದೊರಕಬೇಕು ಎಂಬ ಉದ್ದೇಶದಿಂದ ಸರ್ಕಾರ ಹಾಗೂ ಕಾನೂನು ಸೇವಾ ಪ್ರಾಧಿಕಾರವು ವಿವಿಧ ಮಟ್ಟಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಹೇಳಿದರು.
“ನಾವೆಲ್ಲರೂ ಗ್ರಾಹಕರೇ. ಒಂದು ಸಣ್ಣವಸ್ತು ಖರೀದಿಸಿದರೂ ನಾವು ಗ್ರಾಹಕರಾಗುತ್ತೇವೆ. ಆದ್ದರಿಂದ ಎಚ್ಚರಿಕೆಯಿಂದಿದ್ದು, ಸಂಬಂಧಿತ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು” ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಅನೀಲ ಬಡಗೇರ ಮಾತನಾಡಿ, ಕಡಿಮೆ ಗುಣಮಟ್ಟದ ವಸ್ತುಗಳು ಹಾಗೂ ಸೇವೆಗಳ ಮೂಲಕ ಗ್ರಾಹಕರು ಅನ್ಯಾಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ ಕಾನೂನಿನಡಿ ನ್ಯಾಯ ಪಡೆಯುವ ಮಾರ್ಗಗಳ ಬಗ್ಗೆ ಅರಿವು ಅಗತ್ಯ ಎಂದು ಹೇಳಿದರು.
ವಸ್ತುಗಳನ್ನು ಖರೀದಿಸುವಾಗ ಅವುಗಳ ತಯಾರಿಕಾ ದಿನಾಂಕ, ಅವಧಿ (ಎಕ್ಸ್ಪೈರಿ ಡೇಟ್), ತೂಕ ಹಾಗೂ ಗುಣಮಟ್ಟವನ್ನು ಪರಿಶೀಲಿಸಬೇಕು.
ನ್ಯಾಯವಾದಿಗಳಾದ ಎಸ್.ಬಿ. ಕಾಳೆ ಹಾಗೂ ಲಕ್ಷ್ಮೀ ಸವದಿ ಗ್ರಾಹಕರ ಹಕ್ಕುಗಳು ಮತ್ತು ಪರಿಹಾರ ಕ್ರಮಗಳ ಕುರಿತು ಉಪನ್ಯಾಸ ನೀಡಿದರು. ಕಸ್ತೂರಿ ಜೈನಾಪುರ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ,
ಆಹಾರ ಸಿರಸ್ತೆದಾರ ಬಸವರಾಜ ತಾಳಿಕೋಟಿ, ಆಹಾರ ನಿರೀಕ್ಷಕ ಆನಂದ ರಾಠೋಡ, ಸುರೇಶ ಕುರಿ, ಸೋಮು ಕಿಸ್ತೆನ್ನವರˌ ನ್ಯಾಯಾಲಯದ ಸಿಬ್ಬಂದಿ ಮಂಜುನಾಥ ಡಿ. ಮಹೇಶ್ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

