ಇಂದು (೧೯ ಆಗಸ್ಟ್ ಬುದವಾರ) ಮಾನವೀಯತೆಯ ಬೆಳಕು ಹಂಚಿದ ಖ್ಯಾತ ಸಾಹಿತಿ ಹಾಗೂ ರಾಜ್ಯಸಭಾ ಸದಸ್ಯೆ ಡಾ.ಸುಧಾಮೂರ್ತಿ ಅವರ ಜನ್ಮದಿನದ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಡಾ.ರಾಜಶೇಖರ ನಾಗೂರ.
ಸಂಚಾಲಕರು
’ನಮ್ಮ ಕಥಾ ಅರಮನೆ’
ಉದಯರಶ್ಮಿ ದಿನಪತ್ರಿಕೆ
ಒಂದು ಸಾಹಿತ್ಯ ಕೃತಿ, ಒಂದು ಹೆಣ್ಣಿನ ಜೀವನವನ್ನೇ ಬದಲಾಯಿಸಿದ ಕಥೆಯಿದು. ಒಬ್ಬ ಸಹೃದಯಿ ಲೇಖಕಿಯ ಸಾಹಿತ್ಯಕ್ಕಿರುವ ಶಕ್ತಿ ಎಂಥದ್ದು ಎಂಬುದನ್ನು ತಿಳಿಸುವ ಮನಮುಟ್ಟುವ ಘಟನೆ ಇದು.
ಸುಧಾ ಮೂರ್ತಿಯವರು ಮಮತಾಮೂರ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವರು ಇನ್ಫೋಸಿಸ್ ಧರ್ಮದರ್ಶಿಯಾಗಿದ್ದ ಸಂದರ್ಭದಲ್ಲಿ ನಡೆದ ಒಂದು ಸತ್ಯ ಘಟನೆಯನ್ನು ತಮ್ಮ ‘ಮನದ ಮಾತು’ ಕೃತಿಯಲ್ಲಿ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಯಾವುದೇ ಮದುವೆ ಸಮಾರಂಭಗಳಿಗೆ ಸುಧಾ ಮೂರ್ತಿಯವರು ಹೋಗುತ್ತಿರಲಿಲ್ಲ. ಆದರೆ ಒಂದು ದಿನ ಅವರ ಮುಂದೆ ಬಂದ ಸಾವಿರಾರು ಪತ್ರಗಳ ನಡುವೆ ಒಂದು ಮದುವೆಯ ಕರೆಯೋಲೆ ಇತ್ತು. ಆ ಕರೆಯೋಲೆಯ ಮೇಲೆ ಒಂದು ವಾಕ್ಯ ಸ್ಪಷ್ಟವಾಗಿ ಹೀಗೆ ಬರೆಯಲಾಗಿತ್ತು:
“ನೀವು ನಮ್ಮ ಮದುವೆಗೆ ಬರದಿದ್ದರೆ, ನಾವು ದುರದೃಷ್ಟವಂತರು ಎಂದು ಭಾವಿಸುತ್ತೇವೆ.”
ಆ ಮದುವೆಯ ಕರೆಯೋಲೆಯನ್ನು ಕಳುಹಿಸಿದವರು ಯಾರು ಎಂಬುದೇ ಅವರಿಗೆ ಹೊಳೆಯಲಿಲ್ಲ. ಎಷ್ಟೇ ಯೋಚಿಸಿದರೂ ಅವರು ಯಾರೆಂಬುದು ನೆನಪಾಗಲಿಲ್ಲ. ಕೊನೆಗೆ ತಮ್ಮ ತಂದೆಯ ಒತ್ತಾಯದ ಮೇರೆಗೆ ಆ ಮದುವೆಗೆ ಹೋಗಲು ಸುಧಾ ಮೂರ್ತಿಯವರು ಒಪ್ಪಿಕೊಂಡರು.

ಮದುವೆಯ ಮನೆಗೆ ಬಂದ ಮೇಲೂ ಆ ಮದುವೆ ಯಾರದು ಎಂಬುದು ಅವರಿಗೆ ತಿಳಿಯಲಿಲ್ಲ. “ಇದು ಯಾರ ಮದುವೆ? ನೀವು ನನಗೆ ಹೇಗೆ ಪರಿಚಯ?” ಎಂದು ಕೇಳಲು ಕೂಡ ಅವರಿಗೆ ಮುಜುಗರವಾಯಿತು. ಮದುವೆಯ ಜೋಡಿಗೆ ಹಾರೈಸಿದರು. ಆದರೂ ತಮ್ಮನ್ನು ಆಹ್ವಾನಿಸಿದವರು ಯಾರೆಂಬ ಕುತೂಹಲ ಮಾತ್ರ ಉಳಿಯಿತು.
ಅಷ್ಟರಲ್ಲಿ ವಧುವಿನ ತಂದೆ-ತಾಯಿ ಅವರ ಬಳಿಗೆ ಬಂದು ಅವರನ್ನು ಊಟಕ್ಕೆ ಕರೆದುಕೊಂಡು ಹೋದರು. ಊಟಕ್ಕೆ ಕುಳಿತಾಗ ಅವರು ನಡೆದ ಸಂಗತಿಯನ್ನೆಲ್ಲ ಸುಧಾ ಮೂರ್ತಿಯವರಿಗೆ ವಿವರಿಸಿದರು.
ಆ ಮದುವೆಯ ವಧು-ವರರು ಮಾಲತಿ ಮತ್ತು ಮಧು. ಇಬ್ಬರೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು. ಅವರ ನಿಶ್ಚಿತಾರ್ಥವೂ ಆಗಿತ್ತು. ಮಧು ದುಬೈಯಲ್ಲಿ ಕೆಲಸ ಮಾಡುತ್ತಿದ್ದರೆ, ಮಾಲತಿ ಇಲ್ಲಿಯೇ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.
ನಿಶ್ಚಿತಾರ್ಥದ ನಂತರ ಮಧು ದುಬೈಗೆ ತೆರಳಿದ್ದ. ಕೆಲವು ತಿಂಗಳುಗಳ ಬಳಿಕ ಭಾರತಕ್ಕೆ ಮರಳಿದಾಗ ಮಾಲತಿಯ ಕೈ ಮೇಲೆ ಬಿಳಿ ಮಚ್ಚೆಯೊಂದು ಕಾಣಿಸಿಕೊಂಡಿತು. ಅದನ್ನು ಕಂಡ ಮಧು ಮದುವೆಯಾಗಲು ನಿರಾಕರಿಸಿ ಮತ್ತೆ ದುಬೈಗೆ ತೆರಳಿದ.
ನಿಶ್ಚಿತಾರ್ಥವಾಗಿ ಒಂದು ವರ್ಷ ಕಳೆದಿತ್ತು. ಹೀಗೆ ಮದುವೆಯ ಹೊತ್ತಿನಲ್ಲಿ ಹುಡುಗ ಕೈಬಿಟ್ಟರೆ ಆ ಹುಡುಗಿಯ ಜೀವನದ ಸ್ಥಿತಿ ಏನಾಗಬೇಕು? ಮಾಲತಿ ಮತ್ತು ಆಕೆಯ ತಂದೆ-ತಾಯಿಯ ದುಃಖಕ್ಕೆ ಮಿತಿಯೇ ಇರಲಿಲ್ಲ.
ಆದರೆ ಮಧು ದುಬೈಗೆ ಹೋದ ಮೂರು ತಿಂಗಳ ನಂತರ ಒಂದು ಪತ್ರ ಬಂತು.
“ನಾನು ನಿನ್ನನ್ನು ಮದುವೆಯಾಗುತ್ತೇನೆ. ಯಾವ ಆತಂಕವೂ ಬೇಡ.”
ಈ ಮಾತು ಮಾಲತಿಯ ಬದುಕಿನಲ್ಲಿ ಮತ್ತೆ ಭರವಸೆಯ ಬೆಳಕನ್ನು ಮೂಡಿಸಿತು.
ಹಾಗಾದರೆ, ಮಧುವಿನ ಮನಸ್ಸನ್ನು ಬದಲಿಸಿದ್ದು ಏನು?
ಮಾಲತಿಯನ್ನು ನಿರಾಕರಿಸಿ ದುಬೈಗೆ ತೆರಳುವಾಗ ಮಧು ಸುಧಾ ಮೂರ್ತಿಯವರ ‘ಮಹಾಶ್ವೇತೆ’ ಕಾದಂಬರಿಯನ್ನು ಖರೀದಿಸಿ ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ.

ಆ ಕಾದಂಬರಿಯ ನಾಯಕಿ ಅನುಪಮಾ ಎದುರಿಸುವ ಬಿಳುಪು ರೋಗದ ಕಾರಣವಾದ ಸಾಮಾಜಿಕ ನೋವು, ಅವಮಾನ, ಏಕಾಂತ ಮತ್ತು ಆಕೆಯ ಪತಿಯ ಮನಸ್ಸಿನಲ್ಲಿ ಮೂಡುವ ಪಶ್ಚಾತ್ತಾಪ ಇವೆಲ್ಲವನ್ನೂ ಓದುತ್ತಾ ಮಧುವಿಗೆ ತನ್ನ ತಪ್ಪಿನ ಅರಿವಾಯಿತು.
ತಾನು ಅನುಪಮಾಳ ಪತಿಯಂತೆ ತಪ್ಪು ಮಾಡಬಾರದು ಎಂದು ಆತ ನಿರ್ಧರಿಸಿದ. ತನ್ನ ನಿರ್ಧಾರವನ್ನು ಬದಲಿಸಿಕೊಂಡು ಮಾಲತಿಯನ್ನು ಮದುವೆಯಾಗಲು ಒಪ್ಪಿಕೊಂಡ.
ಹೀಗೆ ಒಂದು ಸಾಹಿತ್ಯ ಕೃತಿ ಒಂದು ಬದುಕನ್ನು ನಿರ್ಮಿಸಿತು. ಒಂದು ತಪ್ಪು ನಿರ್ಧಾರದಿಂದ ಒಂದು ಬದುಕು ಒಡೆಯುವುದನ್ನು ತಡೆಯಿತು. ಒಬ್ಬ ಮನುಷ್ಯನ ಮನಸ್ಸನ್ನು ಬದಲಿಸಿ, ಒಬ್ಬ ಹೆಣ್ಣಿನ ಭವಿಷ್ಯಕ್ಕೆ ಹೊಸ ಅರ್ಥ ನೀಡಿತು.
ಒಂದು ಕೃತಿ ಬದುಕನ್ನು ಬದಲಾಯಿಸಬಲ್ಲದು ಎಂದಾದರೆ, ಅಕ್ಷರದ ಶಕ್ತಿ ಎಷ್ಟಿರಬೇಕು!
ತಮ್ಮ ಒಂದು ಕೃತಿ ಈ ಹೆಣ್ಣಿನ ಬದುಕನ್ನು ಮರುರೂಪಿಸಲು ಕಾರಣವಾಯಿತು ಎಂಬ ಸಂತೋಷದೊಂದಿಗೆ ಸುಧಾ ಮೂರ್ತಿಯವರು ಆ ಮನೆಯಿಂದ ಹೊರಟರು ಎನ್ನುವುದು ಈ ಘಟನೆಯ ಅತ್ಯಂತ ಭಾವನಾತ್ಮಕ ಭಾಗ.
ಸುಧಾ ಮೂರ್ತಿಯವರ ‘ಮನದ ಮಾತು’ ಕೃತಿಯಲ್ಲಿ ಅವರು ಹಂಚಿಕೊಂಡಿರುವ ಈ ಘಟನೆ, ಸಾಹಿತ್ಯದ ನಿಜವಾದ ಶಕ್ತಿ ಏನೆಂಬುದನ್ನು ನಮಗೆ ನೆನಪಿಸುತ್ತದೆ.
ಬರಹ ಕೇವಲ ಮನರಂಜನೆಗಾಗಿ ಅಲ್ಲ.
ಅದು ಮನಸ್ಸನ್ನು ತಟ್ಟಬಹುದು.
ತಪ್ಪು ನಿರ್ಧಾರವನ್ನು ಬದಲಿಸಬಹುದು.
ಒಡೆದ ಬದುಕಿಗೆ ಭರವಸೆ ನೀಡಬಹುದು.
ಒಬ್ಬರ ಬದುಕಿನ ದಿಕ್ಕನ್ನೇ ಬದಲಿಸಬಹುದು.
ಅದೇ ಒಳ್ಳೆಯ ಸಾಹಿತ್ಯದ ಶಕ್ತಿ.
ನಾಳೆ ಸಹೃದಯಿ, ಸರಳತೆ ಮತ್ತು ಮಾನವೀಯತೆಯ ಪ್ರತೀಕವಾಗಿರುವ ಸುಧಾ ಮೂರ್ತಿಯವರ ಜನ್ಮದಿನ.
ಅಕ್ಷರಗಳ ಮೂಲಕ ಸಾವಿರಾರು ಮನಸ್ಸುಗಳನ್ನು ಮುಟ್ಟಿದ, ತಮ್ಮ ಬರಹದ ಮೂಲಕ ಮಾನವೀಯತೆಯ ಬೆಳಕನ್ನು ಹಂಚಿದ ಈ ಮಾತೃಸ್ವರೂಪಿ ಲೇಖಕಿಗೆ ಮುಂಗಡವಾಗಿ ಹೃದಯಪೂರ್ವಕ ಜನ್ಮದಿನದ ಶುಭಾಶಯಗಳು.
ಅವರ ಅಕ್ಷರಯಾನ ಹೀಗೆಯೇ ನಿರಂತರವಾಗಿರಲಿ.
ಇನ್ನಷ್ಟು ಬದುಕುಗಳಿಗೆ ಅವರ ಸಾಹಿತ್ಯ ಬೆಳಕಾಗಲಿ.


