ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಜೀವನವೆಂದರೆ ಡೊನೇಷನ್ ಇಲ್ಲದ ಪಾಠಶಾಲೆ ಅದರಲ್ಲಿ ಪ್ರತಿಯೊಬ್ಬರೂ ಕಲಿಯಲೇಬೇಕು. ನಿಸರ್ಗವೇ ನಮಗೆ ಎಲ್ಲವನ್ನೂ ಕಲಿಸುವ ಮಹಾಗುರು ಎಂದು ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ರೋಣಿಹಾಳ ಗ್ರಾಮದಲ್ಲಿ ಎಡೆಯೂರು ಸಿದ್ಧಲಿಂಗೇಶ್ವರ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಪ್ರೌಢಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಸರ್ಗವೇ ಒಂದು ಮಹತ್ವದ ಪಾಠಶಾಲೆ. ಅದು ಪ್ರತಿಯೊಂದು ವಿಷಯವನ್ನು ಮನುಷ್ಯನಿಗೆ ಕಲಿಸುತ್ತದೆ. ಆದರೆ ಕಲಿಯುವ ಮನಸ್ಸುಗಳು ನಮ್ಮೊಳಗೆ ಇರಬೇಕು. ಅಂತಹ ಮನಸ್ಸುಗಳಿದ್ದರೆ ನಿಸರ್ಗವೇ ಗುರು, ನಾವು ಶಿಷ್ಯರು. ಭೂಮಿಯಲ್ಲಿ ಬಿತ್ತಿದ ಬೀಜದಂತೆ ಮಕ್ಕಳ ಹೃದಯದಲ್ಲಿ ಬಿತ್ತಿದ ಅಕ್ಷರ ಯಾವತ್ತೂ ವ್ಯರ್ಥವಾಗುವುದಿಲ್ಲ. ಶಿಕ್ಷಣದ ಈ ಮಹತ್ವವನ್ನು ನಮ್ಮ ಹಿಂದಿನ ಹಿರಿಯರು ಚೆನ್ನಾಗಿ ಅರಿತಿದ್ದರು ಎಂದು ಹೇಳಿದರು.
ಸಣ್ಣ ಗ್ರಾಮದಲ್ಲೇ ಇಂತಹ ಸುಸಜ್ಜಿತ ಶಾಲೆಯನ್ನು ನಿರ್ಮಿಸಿ ಶಿಕ್ಷಣ ಸಂಸ್ಥೆಯನ್ನು ಬೆಳೆಸುವುದು ಸುಲಭವಲ್ಲ. ಈ ಊರಿನ ಹಿರಿಯರು ಉತ್ತಮ ವಾತಾವರಣದಲ್ಲಿ ಶಾಲೆ ಕಟ್ಟಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಾರ್ಯ ಮಾಡಿದ್ದಾರೆ ಎಂದು ಪ್ರಶಂಸಿಸಿದರು.
ಕಾಖಂಡಕಿ ಗ್ರಾಮದ ಗುರುದೇವಾಶ್ರಮದ ಶಿವಯೋಗೀಶ್ವರ ಮಹಾಸ್ವಾಮೀಜಿ ಮಾತನಾಡಿ, ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಊರಿನ ಹಿರಿಯರು ಹಾಗೂ ಶಿಕ್ಷಕರ ತ್ಯಾಗ ಅತ್ಯಂತ ಮಹತ್ವದ್ದು. ರೋಣಿಹಾಳ ಗ್ರಾಮದಲ್ಲಿ ಮಹಾತಪಸ್ವಿಗಳಾದ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಗಳ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿರುವುದು ಸಂತೋಷದ ಸಂಗತಿ ಎಂದರು.
ಮಕ್ಕಳು ಏನು ಕಲಿಯುತ್ತಾರೆ ಎಂಬುದಕ್ಕಿಂತ ಅವರು ಯಾವ ಸಂಸ್ಕಾರಗಳನ್ನು ಪಡೆಯುತ್ತಾರೆ ಎಂಬುದು ಹೆಚ್ಚು ಮುಖ್ಯ. ಶಾಲೆಯಲ್ಲಿ ನೈತಿಕ ಮೌಲ್ಯಗಳು, ಸದ್ಗುಣಗಳು ಹಾಗೂ ಒಳ್ಳೆಯ ಸಂಸ್ಕಾರಗಳನ್ನು ಮಕ್ಕಳಿಗೆ ಕಲಿಸುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಡೆಯೂರು ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಮೇಶ ಮಮದಾಪೂರ, ಮುಖಂಡರಾದ ಶರಣು ಸಾವುಕಾರ ನ್ಯಾಮಗೌಡ್ರ, ಪೂಜ್ಯರಾದ ರಾಜಶೇಖರಯ್ಯ ಹಿರೇಮಠ, ರಾಚೋಟಯ್ಯ ಹಿರೇಮಠ ಹಾಗೂ ಮಹಾಂತಯ್ಯ ಮಠಪತಿ ಉಪಸ್ಥಿತರಿದ್ದರು.

