ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಆಧ್ಯಾತ್ಮ ಮತ್ತು ಪುರಾಣಗಳ ಮಹತ್ವವನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮ ಮತ್ತು ಪುರಾಣಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ನಿವೃತ್ತ ಶಿಕ್ಷಕರಾದ ಬಸವರಾಜ ಹಂಗರಗಿ ಹೇಳಿದರು.
ಪಟ್ಟಣದ ದಿಗಂಬರೇಶ್ವರ ಸಂಸ್ಥಾನ ಮಠದಲ್ಲಿ ದಿಗಂಬರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಮೂರು ಲೋಕದ ಗಂಡ ಬಬಲಾದಿ ಸದಾಶಿವ ಸ್ವಾಮೀಜಿಗಳ ಪುರಾಣ ಪ್ರಾರಂಭೋತ್ಸವ ಮತ್ತು ಯುಗಾದಿಯ ಹೊಸ ವರ್ಷಾಚರಣೆ ಹಾಗೂ ಬೇವು ಬೆಲ್ಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧ್ಯಾತ್ಮವು ಮನಸ್ಸಿಗೆ ಶಾಂತಿ ನೀಡುವುದಲ್ಲದೆ, ಮಾನವ ಜೀವನವನ್ನು ಪಾವನಗೊಳಿಸುತ್ತದೆ ಎಂದು ಹೇಳಿದರು.
ಪುರಾಣಗಳು ಕಥೆಗಳ ಮೂಲಕ ಧರ್ಮ, ಸತ್ಯ ಮತ್ತು ನೀತಿ ಮೌಲ್ಯಗಳನ್ನು ಬೋಧಿಸುತ್ತವೆ. ಇಂದಿನ ಯುವಜನತೆ ಮತ್ತು ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಪುರಾಣ ಪ್ರವಚನಗಳು ಮತ್ತು ಸತ್ಸಂಗಗಳು ಅಗತ್ಯ.
“ಇಂದಿನ ಯುಗದಲ್ಲಿ ಮಕ್ಕಳಲ್ಲಿ ಪಾಲಕರ ಮಾತು ಕೇಳುವ ಸಂಸ್ಕೃತಿ ನಿಧಾನವಾಗಿ ಕುಗ್ಗುತ್ತಿದೆ. ಸಂಸ್ಕಾರಯುತ ಶಿಕ್ಷಣ, ಸತ್ಸಂಗ ಹಾಗೂ ಧಾರ್ಮಿಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಹಿರಿಯರಿಗೆ ಗೌರವ ಮತ್ತು ಪಾಲಕರ ಮಾತು ಪಾಲಿಸುವ ಗುಣ ಬೆಳೆಸುವುದು ಅತ್ಯವಶ್ಯಕ,” ಎಂದರು.
ಸಾನಿಧ್ಯ ವಹಿಸಿ ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ಮಾತನಾಡಿ, ಮನುಷ್ಯನ ಜೀವನದಲ್ಲಿ ಕಷ್ಟಗಳು ಬರುವುದು ಸಹಜ ಅವು ಪರಿಹಾರ ಆಗದಂತಹ ಸ್ಥಿತಿಯಲ್ಲಿದ್ದಾಗ ದೇವರಲ್ಲಿ ಹರಕೆ ಹೊತ್ತು ತಮಗೆ ಬಂದಿರುವ ಸಂಕಷ್ಟಗಳು ದೂರವಾದಾಗ ದೇವರ ಹರಕೆ ತಿರಿಸುವ ಸಂಪ್ರದಾಯ ಪ್ರತಿಯೊಬ್ಬರು ದೇವರಲ್ಲಿ ಭಯ ಭಕ್ತಿಯಿಂದ ನಡೆದಿದ್ದೆ ಆದರೆ ನಿಮ್ಮ ಜೀವನ ಪಾವನ ವಾಗಲಿದೆ ಎಂದರು.
ನಿವೃತ್ತ ಶಿಕ್ಷಕ ಪಡೆಪ್ಪ ನಾಗರಾಳ ಮಾತನಾಡಿದರು. ಕಾರ್ಯಕ್ರಮವನ್ನು ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ ಉದ್ಘಾಟಿಸಿದರು. ಸಂಗಮೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಬಸಪ್ಪ ಗಿಡ್ಡಪ್ಪಗೋಳ, ಈರಪ್ಪ ಜಿಡ್ಡಿಲಬಾಗಿಲ, ಬಸವರಾಜ ಕೊಠಾರಿ, ಹೂಲಗೇರಿಯ ಗುರುದೇವ ಶಾಸ್ತ್ರಿಗಳು, ಶಾಂತಪ್ಪ ಗಣಿ, ಲಕ್ಷಿಂಬಾಯಿ ಹೆರಕಲ ಸೇರಿದಂತೆ ಮಹಿಳೆಯರು ಇದ್ದರು.ನಿವೃತ್ತ ಶಿಕ್ಷಕ ಶಂಕ್ರಪ್ಪ ಪತಂಗಿ ಕಾರ್ಯಕ್ರಮ ನಿರೂಪಿಸಿದರು.

