ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ನಿಧನಕ್ಕೆ ಕರ್ನಾಟಕ ಪಶು ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಶರಣಪ್ಪ ಜಿ.ಯಲಗೋಡ, ಪ್ರಧಾನ ಕಾರ್ಯದರ್ಶಿ ಡಾ.ರಾಮಚಂದ್ರಯ್ಯ ಎಂ ಸಂತಾಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿವಮೊಗ್ಗದ ಮೃಗಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿಯವರು, ನೀರಾನೆಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ದಾಳಿಗೊಳಗಾಗಿ ಇತ್ತೀಚೆಗೆ ಮೃತರಾಗಿದ್ದು, ಅವರ ನಿಧನವು ಪಶುವೈದ್ಯಕೀಯ ವೃತ್ತಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಕರ್ನಾಟಕ ಪಶು ವೈದ್ಯಕೀಯ ಸಂಘ ರಾಜ್ಯಾಧ್ಯಕ್ಷ ಡಾ.ಶಿವಶರಣಪ್ಪ ಜಿ.ಯಲಗೋಡ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ರಾಮಚಂದ್ರಯ್ಯ ಎಂ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಡಾ.ಸಮೀಕ್ಷಾ ರೆಡ್ಡಿ ನಿಧನಕ್ಕೆ ಕರ್ನಾಟಕ ಪಶು ವೈದ್ಯಕೀಯ ಸಂಘವು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ ಎಂದಿದ್ದಾರೆ.
ವನ್ಯಜೀವಿ ಪಶುವೈದ್ಯಕೀಯ ಸೇವೆಯನ್ನು ಉತ್ಸಾಹದಿಂದಲೇ ಆಯ್ಕೆ ಮಾಡಿಕೊಂಡು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಸಮೀಕ್ಷಾ ರೆಡ್ಡಿಯವರು ಕರ್ತವ್ಯಕ್ಕೆ ಹಾಜರಾದ ಕೇವಲ 1 ¾ ತಿಂಗಳಲ್ಲೇ ನಿರಾನೆ ದಾಳಿಗೆ ತುತ್ತಾಗಿರುವುದು ದುರದೃಷ್ಟಕರ.
ಡಾ.ಸಮೀಕ್ಷಾ ರೆಡ್ಡಿಯವರ ಸಾವಿನ ಕುರಿತಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನೀಡುತ್ತಿರುವ ಮಾಧ್ಯಮ ಹೇಳಿಕೆಗಳು, ಪತ್ರಿಕಾ ಪ್ರಕಟಣೆ ಮತ್ತು ಸಾಂದರ್ಭಿಕ ಸನ್ನಿವೇಶಗಳು ಒಂದಕ್ಕೊಂದು ಗೊಂದಲದಿಂದ ಕೂಡಿದ್ದು, ಈಗಾಗಲೇ ಮೂರ್ನಾಲ್ಕು ದಿನಗಳಿಂದ ಚಿಕಿತ್ಸಾ ಮಾರ್ಗ ಸೂಚಿಯಲ್ಲಿದ್ದ sun conure ಪಕ್ಷಿ ಮತ್ತು ನೀರಾನೆಯ ಚಿಕಿತ್ಸೆಗೆ ದಿನಾಂಕ: 19.03.2026ರ ತಡರಾತ್ರಿ ತನ್ನ ವಾಸ್ತವ್ಯದಲ್ಲಿದ್ದ ಡಾ.ಸಮೀಕ್ಷಾ ರೆಡ್ಡಿರವರನ್ನು ಒಬ್ಬಂಟಿಯಾಗಿ ಕರೆತರುವ ಧಾವಂತವಾದರೂ ಏನಿತ್ತು? ಈ ಕರ್ತವ್ಯಕ್ಕೆ ಯಾವುದೇ ಸುರಕ್ಷತಾ ವಿಧಿವಿಧಾನಗಳಿಲ್ಲದೇ ತಡರಾತ್ರಿಯಲ್ಲಿ ಒಬ್ಬ ಮಹಿಳಾ ಪಶುವೈದ್ಯರನ್ನು ತನ್ನ ವಾಸ್ತವ್ಯದಿಂದ ಮೃಗಾಲಯಕ್ಕೆ ಕರೆತರಲು ನಿರ್ದೇಶನ ನೀಡಿದವರಾರು? ಈ ರೀತಿ ಹಲವು ಅನುಮಾನಗಳ ಹಿನ್ನೆಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಶಿವಮೊಗ್ಗ ಜಿಲ್ಲಾ ಮೃಗಾಲಯ, ಹುಲಿ ಮತ್ತು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಮರಾಕ್ಷರ್, ವಿ.ಎಂ.ರವರ ಮೂಗಿನ ಕೆಳಗೆ ಅವರ ನೇರ ನಿರ್ದೇಶನದಂತೆ ಮೃಗಾಲಯದ ಪ್ರತಿಯೊಂದು ಕರ್ತವ್ಯಗಳನ್ನು ನಿರ್ವಹಿಸಲಾಗುತ್ತಿದ್ದರೂ ಇವರ ಕರ್ತವ್ಯ ಲೋಪವೇ ಡಾ.ಸಮೀಕ್ಷಾ ರೆಡ್ಡಿಯವರ ಅಕಾಲಿಕ ಮರಣಕ್ಕೆ ನೇರ ಹೊಣೆ ಯಾಗಿದ್ದರೂ ಮಾಧ್ಯಮಗಳಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸುವ ಬದಲಾಗಿ, ಒಬ್ಬ ಮಹಾನ್ ಪಶುವೈದ್ಯ ತಜ್ಞರಂತೆ ಮೃತ ಪಶುವೈದ್ಯರ ತಾಂತ್ರಿಕ ಸಮರ್ಥತೆಯ ಬಗ್ಗೆ ಟೀಕಿಸಿ ಉದ್ದಟತನ ಮೆರೆದಿರುವ ಅಮರಾಕ್ಷರ್, ವಿ.ಎಂ.ರವರನ್ನು ಈ ಕೂಡಲೇ ಅಮಾನತ್ತುಗೊಳಿಸಿ, ಘಟನೆ ಕುರಿತು ತನಿಖೆ ನಡೆಸಲು ಘಟನೆಯ ನೈತಿಕ ಹೊಣೆ ಹೊತ್ತು ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾದ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿರುವುದು ಕುರಿ ಕಾಯಲು ತೋಳ ನೇಮಿಸಿದಂತಾಗಿದ್ದು ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ಅಸಾದ್ಯ. ಇದರಿಂದ ಪ್ರಕರಣದ ತನಿಖೆ ದಿಕ್ಕು ತಪ್ಪಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಮತ್ತು ಪಶುವೈದ್ಯೆಯ ಸಾವಿಗೆ ನ್ಯಾಯ ದೊರಕುವ ಭರವಸೆ ಇಲ್ಲದಿರುವ ಹಿನ್ನೆಲೆಯಲ್ಲಿ, ಘಟನೆಯ ಕುರಿತಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಮತ್ತು ಮೃತರ ಕುಟುಂಬಕ್ಕೆ ಕೂಡಲೇ ಕನಿಷ್ಠ 1.0 ಕೋಟಿಗಳ ಪರಿಹಾರ ಪಾವತಿಸುವಂತೆ ಕರ್ನಾಟಕ ಪಶು ವೈದ್ಯಕೀಯ ಸಂಘವು ಸರ್ಕಾರವನ್ನು ಅಗ್ರಹಿಸುತ್ತದೆ ಎಂದಿದ್ದಾರೆ.
ಅರಣ್ಯ ಇಲಾಖೆ ಮತ್ತು ಮೃಗಾಲಯ ಪ್ರಾಧಿಕಾರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಶುವೈದ್ಯರ ಮೇಲಿನ ಪ್ರಾಣಿ ದಾಳಿ ಇದೇ ಮೊದಲಲ್ಲ. ಅರಣ್ಯ ಇಲಾಖೆ ಮತ್ತು ಮೃಗಾಲಯದ ಪ್ರಾಧಿಕಾರಗಳ ವಿವಿಧ ವನ್ಯಜೀವಿ ತಾಣಗಳಲ್ಲಿ ಕರ್ತವ್ಯ ನಿರ್ವಹಿಸಿದ/ನಿರ್ವಹಿಸುತ್ತಿರುವ ಎಲ್ಲಾ ಪಶುವೈದ್ಯರೂ ವನ್ಯಜೀವಿಗಳಿಂದ ಮಾರಣಾಂತಿಕ ದಾಳಿಗೆ ತುತ್ತಾಗಿ ಜೀವನ್ಮರಣದ ನಡುವೆ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಕಳೆದಿರುವ ಮತ್ತು ನಿಧನ ಹೊಂದಿರುವ ಘಟನೆಗಳು ಅವ್ಯಾಹತವಾಗಿದ್ದರೂ ಈ ಕುರಿತು ಯಾವುದೇ ನಿರ್ದಿಷ್ಟ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳದಿರುವುದು ಅರಣ್ಯ ಇಲಾಖೆಯ ವೈಪಲ್ಯದ ದ್ಯೋತಕ ವಾಗಿದ್ದು ಪಶುವೈದ್ಯರ ಜೀವಕ್ಕೆ ಬೆಲೆಯಿಲ್ಲದಂತಾಗಿದೆ. ಪಶುವೈದ್ಯರಲ್ಲದವರು ವನ್ಯಜೀವಿಗಳ ಆರೋಗ್ಯ ರಕ್ಷಣೆ ಕುರಿತಂತೆ ನಿಯಮ ರೂಪಿಸುವುದು, ಆದೇಶ/ನಿರ್ದೇಶನ ನೀಡುವುದು ಮತ್ತು ವ್ಯವಸ್ಥೆ ಯನ್ನು ನಿರ್ವಹಣೆ ಮಾಡುತ್ತಿರುವುದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಹಾಗೂ ಮೃಗಾಲಯ ಪ್ರಾಧಿಕಾರಗಳ ಅವೈಜ್ಞಾನಿಕ ಮತ್ತು ನಿಯಮಬಾಹಿರ ನಿರ್ವಹಣೆಗೆ ಹಿಡಿದ ಕನ್ನಡಿಯಾಗಿದೆ. ಅರಣ್ಯ ಇಲಾಖೆ ಮತ್ತು ಮೃಗಾಲಯ ಪ್ರಾಧಿಕಾರಗಳ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತಂದು ಖಾಯಂ ಪಶು ವೈದ್ಯರನ್ನು ನೇಮಕ ಮಾಡಿಕೊಂಡು ವನ್ಯಜೀವಿ ಪಶುವೈದ್ಯಕೀಯ ಸೇವೆ ಯನ್ನು ಸಂಘಟಿತಗೊಳಿಸುವ ಕುರಿತು ಈಗಾಗಲೇ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಅರಣ್ಯ ಸಚಿವರಿಗೆ ಮತ್ತು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ ಮತ್ತು ಮೃಗಾಲಯ ಪ್ರಾಧಿಕಾರಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಇನ್ನೆಷ್ಟು ವನ್ಯಜೀವಿಗಳ ಮತ್ತು ಪಶುವೈದ್ಯರ ಬಲಿ ಪಡೆಯಬೇಕೋ ತಿಳಿಯದಾಗಿದೆ. ಪಶುವೈದ್ಯರ ಸಮಾಧಿಯ ಮೇಲೆ ಕರ್ತವ್ಯದ ಪತಾಕೆ ಹಾರಿಸುತ್ತಿರುವ ಅರಣ್ಯ ಇಲಾಖೆ ಮತ್ತು ಮೃಗಾಲಯ ಪ್ರಾಧಿಕಾರಗಳ ಧೋರಣೆಯನ್ನು ಕರ್ನಾಟಕ ಪಶುವೈದ್ಯಕೀಯ ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಮಂಗಳವಾರ ಮಾ.೨೪ ರಂದು ರಾಜ್ಯದಾದ್ಯಂತ ವೃತ್ತಿನಿರತ ಪಶುವೈದ್ಯರು ಅಕಾಲಿಕ ಮರಣ ಹೊಂದಿದ ಡಾ.ಸಮೀಕ್ಷಾ ರೆಡ್ಡಿ ಯವರಿಗೆ ಶ್ರದ್ದಾಂಜಲಿ ಸಭೆ ನಡೆಸಿ, ಅವರ ಸಾವಿಗೆ ಕಾರಣವಾಗಿರುವ ಶ್ರೀ.ಅಮರಾಕ್ಷರ್, ವಿ.ಎಂ. ರವರನ್ನು ತಕ್ಷಣ ಅಮಾನತ್ತು ಮಾಡಿ, ಘಟನೆಯ ಕುರಿತು ನ್ಯಾಯಾಂಗ ತನಿಖೆ ನಡೆಸಲು ಹಾಗೂ ಮೃತರ ಕುಟುಂಬಕ್ಕೆ ಕನಿಷ್ಠ ಒಂದು ಕೋಟಿಗಳ ಪರಿಹಾರ ಧನ ಬಿಡುಗಡೆ ಮಾಡಲು ಮತ್ತು ಅರಣ್ಯ ಇಲಾಖೆ ಹಾಗೂ ಮೃಗಾಲಯ ಪ್ರಾಧಿಕಾರಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ ಪಶುವೈದ್ಯರ ಖಾಯಂ ನೇಮಕಾತಿ ಮಾಡಿ ಕೊಂಡು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಹಾಗೂ ಮೃಗಾಲಯದ ಪ್ರಾಧಿಕಾರಗಳ ಸಂಪೂರ್ಣ ಹೊಣೆಗಾರಿಕೆಯನ್ನು ಪಶುವೈದ್ಯರಿಗೆ ನೀಡಲು ಸರ್ಕಾರವನ್ನು ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ದೈನಂದಿನ ಕರ್ತವ್ಯಕ್ಕೆ ಹಾಜ ರಾಗುವ ಮೂಲಕ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಕುರಿತು ಅರಣ್ಯ ಇಲಾಖೆ ಮತ್ತು ಮೃಗಾಲಯ ಪ್ರಾಧಿಕಾರಗಳು ಸೂಕ್ತ ನಿರ್ಧಾರ ಕೈಗೊಳ್ಳದಿದ್ದಲ್ಲಿ ರಾಜ್ಯದಾದ್ಯಂತ ಅರಣ್ಯ ಇಲಾಖೆ ಮತ್ತು ಮೃಗಾಲಯ ಪ್ರಾಧಿ ಕಾರಗಳಿಗೆ ಸಂಬಂಧಿಸಿದ ಎಲ್ಲಾ ಪಶುವೈದ್ಯಕೀಯ ಸೇವೆಯನ್ನು ನಿಲ್ಲಿಸಲು ಮತ್ತು ಪ್ರಸ್ತುತ ಅರಣ್ಯ ಇಲಾಖೆ ಮತ್ತು ಮೈಗಾಲಯ ಪ್ರಾಧಿಕಾರಗಳಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಪಶುವೈದ್ಯರು ಮಾತೃ ಇಲಾಖೆಗೆ ಹಿಂದಿರುಗುವ ಕುರಿತು ತೀರ್ಮಾನ ಕೈಗೊಳ್ಳಲಾಗಿ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಡಾ.ಶಿವಶರಣಪ್ಪ ಜಿ.ಯಲಗೋಡ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ರಾಮಚಂದ್ರಯ್ಯ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

