ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: 2025-26ನೇ ಸಾಲಿನ ಕಬ್ಬಿನ ಬಾಕಿ ಬಿಲ್ಲುಗಳನ್ನು ಇನ್ನೂ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಜಿಲ್ಲಾ ರೈತ ಮುಖಂಡ ಈರಪ್ಪ ಹಂಚಿನಾಳ ತೀವ್ರ ಆಕ್ರೋಶ ವ್ಯಕ್ತಪಡಿಸಿ ಹೋರಾಟದ ಎಚ್ಚರಿಕೆ ನೀಡಿದರು.
ನಗರದ ಎಸ್.ಆರ್. ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ವರ್ಷ ಪೂರ್ತಿ ಶ್ರಮಪಟ್ಟು ಬೆಳೆದ ಕಬ್ಬಿನ ಹಣವನ್ನು ಬಿಡುಗಡೆಗೆ ತಡಮಾಡುವುದು ಅನ್ಯಾಯವಾಗಿದ್ದು, ತಕ್ಷಣ ಬಾಕಿ ಬಿಲ್ಲುಗಳನ್ನು ಬಿಡುಗಡೆ ಮಾಡಬೇಕು.ಇಲ್ಲವಾದರೆ ರಾಜ್ಯ ಮಟ್ಟದ ಹೋರಾಟವನ್ನು ಪ್ರಾರಂಭಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದರು.
ಮಾರ್ಚ್ 30 ರಂದು ಬೆಳಗ್ಗೆ 11 ಗಂಟೆಗೆ ಜಮಖಂಡಿ ತಾಲೂಕಿನ ದೇಸಾಯಿ ವೃತ್ತದಲ್ಲಿ ಸಾವಿರಾರು ಕಬ್ಬು ಬೆಳೆಗಾರರು ಸೇರಿ ಮಹಾ ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಬಾಗಲಕೋಟೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕರೆ ನೀಡಲಾಗಿದೆ. ಹೋರಾಟದ ಮುಂದಿನ ಹಂತದ ರೂಪ ರೇಷೆಯನ್ನು ಅದೇ ದಿನ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ತಾಲೂಕು ರೈತ ಮುಖಂಡ ರಾಜು ನದಾಫ ಮಾತನಾಡಿ, ರೈತರು ಹಗಲು-ರಾತ್ರಿ ಶ್ರಮಪಟ್ಟು ಕಬ್ಬು ಬೆಳೆದರೂ, ಸಮಯಕ್ಕೆ ಸರಿಯಾಗಿ ಹಣ ಸಿಗದಿರುವುದು ಅವರ ಬದುಕಿನ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಸಾಲದ ಬಾಧೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಪರಿಸ್ಥಿತಿ ಮುಂದುವರಿದರೆ ರೈತರು ತೀವ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಪ್ರಸ್ತುತ ಹಂಗಾಮಿನಲ್ಲಿ ಕಬ್ಬು ಬೆಳೆದ ರೈತರಿಗೆ ಡಿಸೆಂಬರ್, ಜನವರಿ ಹಾಗೂ ಮಾರ್ಚ್ ತಿಂಗಳುಗಳಾದರೂ ಇದುವರೆಗೆ ಯಾವುದೇ ಬಾಕಿ ಬಿಲ್ಲು ಪಾವತಿಯಾಗದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಬ್ಯಾಂಕ್ ಸಾಲ, ಖಾಸಗಿ ಸಾಲ ಹಾಗೂ ಕೃಷಿ ವೆಚ್ಚಗಳನ್ನು ಭರಿಸಲು ಸಾಧ್ಯವಾಗದೇ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವಾರು ಕುಟುಂಬಗಳು ಜೀವನ ನಿರ್ವಹಣೆಯಲ್ಲಿಯೇ ಸಂಕಷ್ಟ ಅನುಭವಿಸುತ್ತಿವೆ.
ಇದಕ್ಕೂ ಮುನ್ನ ರಾಜ್ಯದ ವಿವಿಧ ಭಾಗಗಳಲ್ಲಿ ಕಬ್ಬಿನ ದರ ಹೆಚ್ಚಳ ಮತ್ತು ಬಾಕಿ ಬಿಲ್ಲು ಪಾವತಿಗಾಗಿ ನಡೆದ ಹೋರಾಟಗಳನ್ನು ಸ್ಮರಿಸಿದ ಅವರು, ಪ್ರಸ್ತುತ ಪರಿಸ್ಥಿತಿ ಕೂಡ ಅದೇ ರೀತಿಯ ಹೋರಾಟಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಹೇಳಿದರು. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಸ್ಥಿಕೆ ವಹಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ಶ್ರೀಶೈಲ ಹುಮಾರ, ಬಾಬುನಗೌಡ ಪಾಟೀಲ, ಸಿದ್ದಪ್ಪ ಬಣಜ , ಕಲ್ಲಪ್ಪ ಬಿರಾದರ,ಮುತ್ತಪ್ಪ ಕುಮಾರ ಇದ್ದರು.

