ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ (ಪಿಡಿಒ) ಶಿವಾನಂದ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಬೇಸಿಗೆಯ ಸಮಯದಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಸಮರ್ಪಕ ನೀರಿನ ಸರಬರಾಜು ಇಲ್ಲದ ಕಾರಣ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ನೀರು ರಸ್ತೆಯ ಮೇಲೆಯೇ ಹರಿದು ಪರಿಸರ ಅಸ್ವಚ್ಛವಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದ್ದು, ಕೀಟ-ಕೀಟಕಗಳ ಸಂಖ್ಯೆ ಹೆಚ್ಚಾಗಿದೆ. ರಾತ್ರಿ ವೇಳೆ ಕಚ್ಚುಹುಳಗಳ ಕಾಟದಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಇನ್ನು ಗ್ರಾಮದಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಬಲ್ಬ್ಗಳನ್ನು ಅಳವಡಿಸದಿರುವುದರಿಂದ ರಾತ್ರಿ ವೇಳೆ ಅಂಧಕಾರ ಆವರಿಸುತ್ತಿದ್ದು, ಸಾರ್ವಜನಿಕರಿಗೆ ಸಂಚಾರದಲ್ಲಿ ತೊಂದರೆ ಉಂಟಾಗಿದೆ. ಆದ್ದರಿಂದ ತುರ್ತಾಗಿ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಗ್ರಾಮದ ಸ್ವಚ್ಛತೆಗೂ ಆದ್ಯತೆ ನೀಡಬೇಕಿದ್ದು, ನೈರ್ಮಲೀಕರಣ ಕಾರ್ಯ ಕೈಗೊಂಡು ಹತ್ತಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಹಾವಿನಾಳ ಹಾಗೂ ಸಂಖ ಗ್ರಾಮದಲ್ಲು ಇದೆ ಪರಿಸ್ಥಿತಿ ಇದ್ದು ಸ್ವಚ್ಛತೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ಚಡಚಣ ಅಧ್ಯಕ್ಷ ಅಣ್ಣಾ ಪೂಜಾರಿ, ಪದಾಧಿಕಾರಿಗಳು, ಕಾರ್ಯಕರ್ತ ತುಕಾರಾಮ ಇಂಗಳೆ ಹಾಗೂ ಗ್ರಾಮಸ್ಥರಾದ ಚುಕ್ಕು ವಾಘಮೋರೆ, ಬಸವರಾಜ ಶಿಂಧೆ,ಬಸು ವಾಘಮೋರೆ, ಸಚೀನ ವಾಘಮೋರೆ ಉಪಸ್ಥಿತರಿದ್ದರು.
” ಬೇಸಿಗೆಯಲ್ಲಿ ಈಗಾಗಲೆ ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಂಡಿದ್ದೆವೆ ಕೆಲವೊಂದು ಸಲ ನೀರಿನ ಮೋಟರ್ ಸುಟ್ಟಾಗ ಒಂದು ಅಥಾವಾ ಎರಡು ದಿನ ತೊಂದರೆ ಆಗುತ್ತದೆ ಗ್ರಾಮಸ್ಥರು ಸಹಕರಿಸಬೇಕು. ಮೊಟರ್ ರಿಪೇರಿ ಆದ ತಕ್ಷಣ ಕುಡಿಯುವ ನೀರು ಬಿಡಲಾಗುತ್ತದೆ. ಒಳಚರಂಡಿ ವ್ಯವಸ್ಥೆಗೆ ಸರಕಾರದ ಅನುಮತಿ ಹಾಗು (ಫಂಡ)ಅನುದಾನ ಬೇಕಾಗುವುದರಿಂದ ಒಳಚರಂಡಿ ಅಳವಡಿಸಲು ಸಮಯಾವಕಾಶ ಬೇಕಾಗುತ್ತದೆ ಆದರೂ ರಸ್ತೆಮೇಲೆ ಅಥವಾ ಅಕ್ಕಪಕ್ಕದಲ್ಲಿ ಹೊಲಸು ನೀರು ನಿಂತಿದ್ದರೆ ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛವಾಗಿಡಲಾಗುವದು.”
– ಶಿವಾನಂದ ಬಿರಾದಾರ
ಹತ್ತಳ್ಳಿ,ಹಾವಿನಾಳ ಹಾಗೂ ಸಂಖ ಗ್ರಾಮದ ಪಿಡಿಒ

