ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಮರುದಿನವಾದ ಭಾನುವಾರ ಆಲಮಟ್ಟಿಯ ಎಲ್ಲಉದ್ಯಾನಗಳು ಪ್ರವಾಸಿಗರಿಂದ ಭರ್ತಿಯಾಗಿದ್ದವು.
ಎಲ್ಲಿ ನೋಡಿದರು ಜನ ಸಾಗರವಿತ್ತು.
ಆಲಮಟ್ಟಿಯ ವಿಶಾಲವಾದ ರಾಕ್ ಉದ್ಯಾನ, ಕೃಷ್ಣ, ಲವಕುಶ ಹಾಗೂ ಮೊಘಲ್ ಸೇರಿದಂತೆ ಬಹುತೇಕ ಉದ್ಯಾನಗಳಲ್ಲಿ ಹೆಚ್ಚಿನ ಪ್ರವಾಸಿಗರು ಕಂಡು ಬಂದರು.
ಹಬ್ಬದ ಮರುದಿನ ಹೆಚ್ಚು:
ಪ್ರತಿ ಬಾರಿಯೂ ಹಬ್ಬದ ಮರುದಿನ ಈ ರೀತಿಯ ಪ್ರವಾಸಿಗರ ಸಂಖ್ಯೆ ಅಧಿಕಗೊಳ್ಳುವುದು ಸಾಮಾನ್ಯ ಎನ್ನುತ್ತಾರೆ ಉದ್ಯಾನದಲ್ಲಿ ಕೆಲಸ ನಿರ್ವಹಿಸುವ ಅರಣ್ಯ ಇಲಾಖೆ ಸಿಬ್ಬಂದಿ. ಅದಕ್ಕಾಗಿ ಸಾಕಷ್ಟು ಸಂಖ್ಯೆಯ ಕೆಎಸ್ಐಎಸ್ಎಫ್ ಸಿಬ್ಬಂದಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು, ದಿನಗೂಲಿಗಳು, ಪೊಲೀಸ್ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದವು. ಪ್ರತಿ ವರ್ಷವೂ ಸಾಕಷ್ಟು ಸಂಖ್ಯೆಯ ಪ್ರವಾಸಿಗರ ಸಂಖ್ಯೆಯ ಆಗಮನದ ಹಿನ್ನಲೆಯಲ್ಲಿ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು.
ಕೆಬಿಜೆಎನ್ಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ತಾರಾಸಿಂಗ್ ದೊಡಮನಿ ನೇತೃತ್ವದಲ್ಲಿ ಸಭೆ ನಡೆಸಿ ಕೆಬಿಜೆಎನ್ಎಲ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
ಕೂಗಾಟ, ನಲಿದಾಟ, ವಿವಿದೆಡೆ ಆಟ, ಮನೋರಂಜನೆಯಲ್ಲಿ ಮುಳುಗಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು. ವಾಟರ್ ಅಮ್ಯೂಸ್ ಮೆಂಟ್ ಪಾರ್ಕ್ , ಬೋಟಿಂಗ್ ಪ್ರವಾಸಿಗರಿಂದ ತುಂಬಿ ತುಳುಕಿತ್ತು.
ಹೆಚ್ಚುವರಿ ಪೊಲೀಸ್ ಸಿಬ್ಬಂದಿ:
ಪ್ರತಿ ವರ್ಷವೂ ಹಬ್ಬದ ಹಿನ್ನಲೆಯಲ್ಲಿ ಆಲಮಟ್ಟಿಗೆ 20 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುವ ಹಿನ್ನಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಬಸವನಬಾಗೇವಾಡಿ ಡಿವೈಎಸ್ ಪಿ ನೇತೃತ್ವದಲ್ಲಿ 60 ಪೊಲೀಸರು, ಒಂದು ಡಿಆರ್ ವಾಹನ ಸಿಬ್ಬಂದಿ, ಕೆಎಸ್ಐಎಸ್ಎಫ್ ಅಸಿಸ್ಟಂಟ್ ಕಮಾಂಡೆಂಟ್ ಈರಪ್ಪ ವಾಲಿ ನೇತೃತ್ವದಲ್ಲಿ 60ಕ್ಕೂ ಅಧಿಕ ಕೆಎಸ್ಐಎಸ್ಎಫ್ ಸಿಬ್ಬಂದಿ, ಡಿಎಫ್ ಓ ಎನ್.ಕೆ. ಬಾಗಾಯತ್ ನೇತೃತ್ವದಲ್ಲಿ 200 ಕ್ಕೂ ಹೆಚ್ಚು ಅರಣ್ಯ ಇಲಾಖೆಯ ದಿನಗೂಲಿ ಕಾರ್ಮಿಕರನ್ನು ನಿಯೋಜಿಸಲಾಗಿತ್ತು.
ಇದರಿಂದ ಪ್ರವಾಸಿಗರ ಸುಲಭ ಪ್ರವೇಶ, ಮೂಲಭೂತ ಸೌಕರ್ಯ ಕಲ್ಪಿಸಲು, ಸುಲಭ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ನೆರವಾಯಿತು.
ಭರ್ಜರಿ ವ್ಯಾಪಾರ
ನಾನಾ ಉದ್ಯಾನಗಳಲ್ಲಿ ಸಾಕಷ್ಟು ಪ್ರವಾಸಿಗರು ಆಗಮಿಸಿದ್ದರಿಂದ ಕೋಲ್ಡಿಂಕ್ಸ್, ಐಸ ಕ್ರೀಂ, ಚಕ್ಕುಲಿ, ಪಾಪಡಿ, ಚೀಪ್ಸ್, ಕಬ್ಬಿನ ಹಾಲು, ನೀರಿನ ಬಾಟಲ್, ರೈಸ್ ಬಾತ್ ಸೇರಿದಂತೆ ನಾನಾ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿತು. ಸ್ಥಳದಲ್ಲೇ ಫೋಟೋ ಪ್ರಿಂಟ್ ಹಾಕುವವರು, ವಿವಿಧ ಉದ್ಯಾನದ ಚಿತ್ರಗಳನ್ನು ಮಾರುವವರ ವ್ಯಾಪಾರ ಭರ್ಜರಿಯಾಗಿತ್ತು.

