ಬರ ಪರಿಸ್ಥಿತಿ ಕುರಿತ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾಹಿತಿ
ಕುಡಿವ ನೀರಿನ ಸಮಸ್ಯೆಯಾಗದಂತೆ
ಕ್ರೀಯಾಯೋಜನೆ | ೫೪,೬೩೪ ಲಕ್ಷ ರೂ. ಎನ್.ಡಿ.ಆರ್.ಎಫ್ ಸಹಾಯಕ್ಕಾಗಿ ಮನವಿ
ವಿಜಯಪುರ: ಜನರ ಆಶೋತ್ತರಗಳಿಗೆ ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾಯೋನ್ಮುಖರಾಗಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆ, ಕುಡಿಯುವ ನೀರಿನ ಪೂರೈಕೆ ಕುರಿತು ಸೋಮವಾರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ೧೨ ತಾಲೂಕುಗಳನ್ನು ತೀವ್ರ ಬರ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ತಿಕೋಟಾ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎನ್.ಡಿ ಆರ್.ಎಫ್ ಮಾನದಂಡದಿಂದಾಗಿ ಬರ ಎಂದು ಘೋಷಣೆ ಆಗದೇ ಇರುವುದರಿಂದ ಇತರ ಮಾನದಂಡಗಳನ್ನು ಪರಿಗಣಿಸಿ ತಿಕೋಟಾ ತಾಲೂಕನ್ನು ಬರ ಘೋಷಣೆ ಮಾಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಮುಂಬರುವ ದಿನಗಳಲ್ಲಿ ಬರ ಘೋಷಣೆಯಾಗಲಿದೆ ಎಂದು ತಿಳಿಸಿದ ಸಚಿವರು, ಜಿಲ್ಲೆಯಲ್ಲಿ ಡಿಸೆಂಬರ್ ೧೫ರಿಂದ ಜೂನ್ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಬಹುದಾಗಿರುವುದರಿಂದ ಈಗಿನಿಂದಲೇ ಕುಡಿಯುವ ನೀರಿಗಾಗಿ ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡು, ಆದ್ಯತೆ ನೀಡಿ, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬರ ಪರಿಸ್ಥಿತಿಯ ಕುರಿತು ಪ್ರತಿ ೧೫ ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಕುಡಿಯುವ ನೀರು, ವಿದ್ಯುತ್ ಸಮಸ್ಯೆ ನರೆಗಾ ಯೋಜನೆಯಡಿ ಉದ್ಯೋಗ ನೀಡುವ ಕುರಿತು ಯಾವುದೇ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಮಟ್ಟಗಳಲ್ಲಿ ನಿರಂತರ ಸಭೆ ನಡೆಸಿ, ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡು ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಹೆಚ್ಚುವರಿ ಅವಧಿಗೆ ಕಾರ್ಯ ನಿರ್ವಹಿಸಬೇಕು. ಆಗಾಗ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಬೇಕು ಮತ್ತು ಸಮಸ್ಯೆಗೆ ಪರಿಹಾರ ಒದಗಿಸಬೇಕು. ಜಿಲ್ಲೆಯ ಎಲ್ಲ ಅಧಿಕಾರಿಗಳು ದೂರವಾಣಿ ಕರೆಗಳಿಗೆ ಸ್ಪಂದಿಸಬೇಕು. ಕುಡಿಯುವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯ ವಹಿಸದೇ ಗಂಭೀರವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಹಾಗೂ ತೋಟಗಾರಿಕೆಯ ೪೯೨೨೪೭ ಲಕ್ಷ ಹೆಕ್ಟರ್‌ನಷ್ಟು ಪ್ರದೇಶ ಬೆಳೆ ಹಾನಿಯಾಗಿದ್ದು, ೫೪೬೩೪ ಲಕ್ಷ ರೂಗಳ ಎನ್.ಡಿ.ಆರ್‌ಎಫ್ ಸಹಾಯಕ್ಕಾಗಿ ಮನವಿ ಸಲ್ಲಿಸಲಾಗಿದೆ. ಎನ್.ಡಿ ಆರ್.ಎಫ್ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮಾರ್ಗ ಸೂಚಿಯ ಬದಲಾವಣೆಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ೬ ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದ್ದು, ಆದಾಗ್ಯೂ ನೀರಾವರಿ ಪಂಪಸೆಟ್‌ಗಳಿಗೆ ೩ ಬ್ಯಾಚ್‌ಗಳಲ್ಲಿ ಐದು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮವಹಿಸಲಾಗಿದೆ. ಕೆಲವು ವಿತರಣಾ ಕೇಂದ್ರಗಳಲ್ಲಿ ಸಾಮರ್ಥ್ಯ ಕಡಿಮೆ ಇರುವುದರಿಂದ ೨ ವಿಭಾಗಗಳಲ್ಲಿ ವಿಂಗಡಿಸಿ ಹಗಲು ವೇಳೆಯಲ್ಲಿ ೩ಗಂಟೆ ಹಾಗೂ ರಾತ್ರಿ ವೇಳೆಯಲ್ಲಿ ೨ ಗಂಟೆ ಸೇರಿದಂತೆ ನಿರಂತರವಾಗಿ ೫ ಗಂಟೆಗಳ ಕಾಲ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗಿದೆ. ನವೆಂಬರ ೧ರಿಂದ ಜಿಲ್ಲೆಯಲ್ಲಿ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮು ಪ್ರಾರಂಭದಿಂದ, ೧೭೮ ಮೆ.ವ್ಯಾ. ವಿದ್ಯುತ್ ಜಿಲ್ಲೆಯಿಂದ ಉತ್ಪಾದನೆಯಾಗುವ ವಿದ್ಯುತ್ ಬಳಕೆಯಿಂದ ವಿದ್ಯುತ್ ಬೇಡಿಕೆ ಕಡಿಮೆಯಾಗಲಿದೆ. ೨ ಲಕ್ಷ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರೋಷನ್ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಜನವರಿ ೨೦೨೩ರಿಂದ ಅಕ್ಟೋಬರ್ ೧೪ರ ವರೆಗೆ ವಾಡಿಕೆ ಮಳೆ ೫೨೮ ಮಿ.ಮಿ ಇದ್ದು ೩೯೦ ಮಿ.ಮಿ ಮಳೆಯಾಗಿದ್ದು ೨೬ ಪ್ರತಿಶತ ಕಡಿಮೆಯಾಗಿದೆ. ೭೩೬೭೯೪ ಹೆಕ್ಟೆರಿನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ೬೪೨೮೨೭ ಹೆಕ್ಟೇರ ಪ್ರದೇಶದಲ್ಲಿ ಶೇ ೮೭.೨೫ರಷ್ಟು ಬಿತ್ತನೆಯಾಗಿರುತ್ತದೆ. ಇದರಲ್ಲಿ ಜಿಲ್ಲೆಯಲ್ಲಿ ತೊಗರಿ ಹೆಚ್ಚು ೩೬೬೪೦೭ ಹೆಕ್ಟೇರ್ ಬಿತ್ತನೆಯಾಗಿದೆ. ಮಕ್ಕೆಜೋಳ ೯೫೮೩೩, ಸಜ್ಜೆ ೯೫೬೯, ಸೂರ್ಯಕಾಂತಿ ೨೦೦೩, ಹತ್ತಿ ೫೩೬೭೬ ಬಿತ್ತನೆಯಾಗಿದೆ. ೨೬೭೩೬ ಕ್ವಿಂಟಾಲ್ ಬಿತ್ತನೆ ಬೀಜ ಹಾಗೂ ೪೪೫೪೫ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇರುತ್ತದೆ. ಸಧ್ಯ ಕೊರತೆ ಇರುವುದಿಲ್ಲ ಎಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಬೊಮ್ಮಣಜೋಗಿ, ಪುರದಾಳ ಕೆರೆಗೆ ನೀರು ಒದಗಿಸುವ ಮೂಲಕ ಅನುಕೂಲ ಕಲ್ಪಿಸಿಕೊಡಬೆಕೆಂದು ದೇವರ ಹಿಪ್ಪರಗಿ ಶಾಸಕರಾದ ರಾಜು ಪಾಟೀಲ ಮಾತಿಗೆ ಸ್ಪಂದಿಸಿದ ಸಚಿವರು ಕೊನೆಯ ಹಂತದ ವರೆಗೆ ನೀರು ಹರಿಸಲು ಕ್ರಮ ವಹಿಸಬೇಕು ಹಾಗೂ ಕಾಲುವೆ ನೀರು ಪೋಲಾಗದಂತೆ ನೋಡಿಕೊಳ್ಳಲು ನರಂತರ ನಿಗಾ ವಹಿಸುವಂತೆ ಪೋಲಿಸ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯುತ್, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಬಿತ್ತನೆ ಹಾಗೂ ಬೆಳೆ ಹಾನಿ ವಿವರ, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿರುವ ನೀರಿನ ಸಂಗ್ರಹ ಹಿಂಗಾರು ಹಂಗಾಮಿನಲ್ಲಿ ರಸಗೊಬ್ಬರ ಬೇಡಿಕೆ, ನರೆಗಾ ಯೋಜನೆ, ಉದ್ಯೋಗ ನೀಡುವ ಕುರಿತಾಗಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.