ಮಕ್ಕಳ ಕತೆ
- ಮಂಡ್ಯ ಮ.ನಾ.ಉಡುಪ
ರಾಜನ ಶಯನಾಗೃಹದಲ್ಲಿ ಹೇನೊಂದು ಸೇರಿಕೊಂಡಿತ್ತು. ರಾಜನ ಹಂಸತೂಲಿಕಾ ಮಂಚದಲ್ಲಿ ಹಗಲಿಡೀ ಆ ಹೇನು ವಿಶ್ರಾಂತಿ ತೆಗೆದುಕೊಂಡು ರಾತ್ರಿಯ ವೇಳೆಯಲ್ಲಿ ರಾಜನು ಸುಖನಿದ್ರೆಗೆ ಜಾರಿದಾಗ ರಾಜನ ಅರಿವಿಗೆ ಬಾರದಂತ ರಾಜನ ತಲೆಯನ್ನು ಸೇರಿ ಅವನ ಅರಿವಿಗೆ ಬಾರದಂತೆ ರಕ್ತಹೀರುತಿತ್ತು. ಹೀಗೆ ಆ ಹೇನು ಬಹಳ ಕಾಲದಿಂದಲೂ ಅಲ್ಲಿ ಸುಖವಾಗಿ ನೆಲೆಸಿತ್ತು.
ಹೀಗಿರಲು ಒಂದುದಿನ ರಾಜನ ಶಯ್ಯಾಗೃಹಕ್ಕೆ ತಿಗಣೆಯೊಂದು ಬಂತು. ಆಗ ಹೇನು ಹೇಳಿತು
” ನೋಡು ನೀನು ಇಲ್ಲಿದ್ದರೆ ನಮ್ಮಿಬ್ಬರನ್ನೂ ಹುಡುಕಿ ಕೊಲ್ಲುತ್ತಾರೆ…” .
ಎಂದಿತು. ಆಗ ತಿಗಣೆ ಹೇಳಿತು
” ಗೆಳೆಯ ಮನೆಗೆ ಬಂದ ಅತಿಥಿಯನ್ನು ನಿರಾಸೆ ಮಾಡಿ ಹಾಗೇ ಕಳಿಸಬಾರದು. ನಾನು ಹೆಚ್ಚುಕಾಲ ಇಲ್ಲಿರಲಾರೆ. ನಾನು ಅಧಿಕಾರಿಗಳ , ರೈತರ , ಸಾಮಾನ್ಯ ಜನರ ರಕ್ತವನ್ನು ಹೀರಿದ್ದೆ. ಆದರೆ ರಾಜನ ರಕ್ತ ಹೀರಿಲ್ಲ. ಒಂದೇ ಒಂದು ಸಾರಿ ರಾಜನ ರಕ್ತದ ರುಚಿನೋಡಿ ಹೋಗುವೆ..”
ಎಂದು ಅಂಗಲಾಚಿತು ತಿಗಣೆ. ಅದಕ್ಕೆ ಹೇನು
” ನೋಡು ನೀನು ಮೊದಲೇ ಆತುರಗಾರ. ರಾಜನಿಗೆ ಎಚ್ಚರವಿರುವಾಗ ಕಚ್ಚಿದರೆ ಇಬ್ಬರಿಗೂ ಅಪಾಯ . ನಾವಾದರೆ ರಾಜನಿಗೆ ಸ್ವಲ್ಪವೂ ಗಮನಕ್ಕೆ ಬರದಂತೆ ರಕ್ತ ಹೀರಿದರೆ ನೀನೋ ಅಪಾರ ಯಾತನೆ ನೀಡಿ ರಕ್ತಹೀರುವೆ…”
ಎಂದಿತು. ಮತ್ತೆ ತಿಗಣೆಯು ಹೇನಿನ ಬಳಿ
” ಇದೊಂದೇ ಒಂದು ರಾತ್ರಿ ಇದ್ದು ಹೋಗುವೆ..”
ಎಂದಾಗ ಹೇನು ಒಲ್ಲದ ಮನಸ್ಸಿನಿಂದ ಒಪ್ಪಿತು.
ರಾಜ ಶಯ್ಯಾಗೃಹವನ್ನು ಸೇರಿದಾಗಲೇ ತಿಗಣೆಗೆ ಆತುರ . ಅದು ಹೇನಿನ ಮಾತು ಕೇಳದೇ ರಾಜನ ರಕ್ತ ಹೀರಲಾರಂಬಿಸಿದಾಗ ರಾಜ ಅಪಾರ ವೇದನೆಯಿಂದ ನರಳಿದ. ಅವನು ಸೇವಕರನ್ನು ಕರೆದು ತನ್ನ ಹಾಸಿಗೆಯನ್ನು ಶೋಧಿಸಿದಾಗ ಅಲ್ಲಿ ಕಂಡ ಹೇನು ಮತ್ತೆ ತಿಗಣೆ ಎರಡನ್ನೂ ಸೇವಕರು ಕೊಂದುಬಿಟ್ಟರು.
*ಹೀಗೆ ದುಷ್ಟರ ಜೊತೆ ಇದ್ದರೆ ನಮಗೆ ಅಪಾಯ ತಪ್ಪದು.*