ಲೇಖನ
– ವೀಣಾ ಹೇಮಂತಗೌಡ ಪಾಟೀಲ
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಈ ಪ್ರಪಂಚದ ಎಷ್ಟೋ ವಿಷಯಗಳು ನಮಗೆ ಗೊತ್ತಿಲ್ಲ. ಎಲ್ಲರಿಗೂ ಎಲ್ಲವೂ ಗೊತ್ತಿರಲೇಬೇಕು ಎಂದಿಲ್ಲ. ಈ ವಿಷಯದಲ್ಲಿ ಈ ಭೂಮಿಯ ಮೇಲಿರುವ ಯಾವೊಬ್ಬ ವ್ಯಕ್ತಿಯೂ ಪರಿಪೂರ್ಣನಲ್ಲ. ಎಲ್ಲರೂ ತಮಗೆ ಆಸಕ್ತಿ ಇರುವ ಒಂದಲ್ಲ ಒಂದು ವಿಷಯದಲ್ಲಿ ಪರಿಪೂರ್ಣತೆಯನ್ನು ಸಾಧಿಸಬಹುದೇ ಹೊರತು ಎಲ್ಲ ವಿಷಯಗಳಲ್ಲಿ ಒಂದೇ ಮಟ್ಟದ ಪರಿಣತಿಯನ್ನು ಸಾಧಿಸುವುದು ಖಂಡಿತವಾಗಿಯೂ ಅಸಾಧ್ಯ.
ನಗರದ ಇಬ್ಬರು ಒಂದೇ ಸಮನೆ ಮಳೆ ಬರುತ್ತಿದ್ದರೆ ಅಯ್ಯೋ ಹಾಳು ಮಳೆ! ಒಂದೇ ಸಮನೆ ಹಿಡಿದಿದೆ. ಯಾವಾಗ ನಿಲ್ಲುತ್ತದೆಯೋ ಏನೋ? ಸಾಕಾಗಿ ಹೋಗಿದೆ ಎಂದು ಮಾತನಾಡಿದರೆ ಅಲ್ಲಿಯೇ ನಿಂತ ಮತ್ತೋರ್ವ ವ್ಯಕ್ತಿ ಹವಾಮಾನ ವೈಪರೀತ್ಯದಿಂದಾಗಿ ವಾತಾವರಣ ಹೀಗಿದ್ದು ಮಳೆ ಹುಯ್ಯುತ್ತಿದೆ. ಈ ಮಳೆ ಇನ್ನೂ ನಾಲ್ಕು ದಿನಗಳ ಕಾಲ ಹೀಗೆಯೇ ಸುರಿಯುತ್ತದೆ ಎಂದು ಹೇಳಬಹುದು. ಇದಕ್ಕೆ ಕಾರಣ ಮಳೆಯ ಕುರಿತು ಆತನಿಗೆ ಇರಬಹುದಾದ ಜ್ಞಾನ ಮತ್ತು ಮತ್ತು ಉಳಿದವರಿಗೆ ಅದರ ಕುರಿತಾದ ಮಾಹಿತಿ ಅಷ್ಟಾಗಿ ಇಲ್ಲದೆ ಇರುವುದು.
ಇದರ ಅರ್ಥ ಇಷ್ಟೇ.. ಎಲ್ಲವನ್ನು ಬಲ್ಲವರು ಯಾರೂ ಇಲ್ಲ ಬಲ್ಲವರು ಬಹಳ ಇಲ್ಲ. ನಮಗೆ ಎಲ್ಲವೂ ಗೊತ್ತಿದೆ ಎಂದು ಯಾರಾದರೂ ಹೇಳಿದರೆ ಅದು ಅವರ ದಡ್ಡತನವನ್ನು ತೋರಿಸುತ್ತದೆ. ಇಂತಹ ದಡ್ಡತನವನ್ನು ಹೋಗಲಾಡಿಸುವುದು ಹೇಗೆ ಎಂಬ ಪ್ರಶ್ನೆ ಬಹಳಷ್ಟು ಬಾರಿ ನಮ್ಮನ್ನು ಕಾಡುತ್ತದೆ.
ಈಗಾಗಲೇ ಶಾಲೆಯನ್ನು ಕಲಿತು ಬದುಕಿನ ಹತ್ತು ಹಲವು ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಂದೆ ತಾಯಿಗೆ ಅವರ ಪುಟ್ಟ 8-10 ವರ್ಷದ ಮಗು ತನಗೆ ಯಾವುದೋ ಒಂದು ವಿಷಯ ತಿಳಿಯುತ್ತಿಲ್ಲ ಎಂದು ಹೇಳಿದಾಗ ಪಾಲಕರು ಇಷ್ಟು ಚಿಕ್ಕ ವಿಷಯ ನಿನಗೆ ತಿಳಿಯುವುದಿಲ್ಲವೇ? ಎಂತ ದಡ್ಡ ನೀನು! ಎಂದು ಮಗುವಿಗೆ ತಮಗರಿವಿಲ್ಲದೆಯೇ ಹೀಯಾಳಿಸಿ ಮಾತನಾಡುತ್ತಾರೆ. ಆದರೆ ಮುಂದೆ ಅದೇ ಪಾಲಕರು ತಮ್ಮ ಮೊಬೈಲ್ನ ಯಾವುದೋ ಒಂದು ಕಾರ್ಯವೈಖರಿ ಅರ್ಥವಾಗದೆ ಹೋದಾಗ ಅದನ್ನು ಅರಿಯಲು ತಮ್ಮದೇ ಮಕ್ಕಳ ಬಳಿ ಏನಾಗಿದೆ ನೋಡು! ಎಂದು ಕೇಳುತ್ತಾರೆ. ಹಾಗಾದರೆ ಇದರಲ್ಲಿ ಮಕ್ಕಳು ದಡ್ಡರೇ? ಎಂದು ಕೇಳಿದರೆ ಇಲ್ಲ! ಪಾಲಕರು ದಡ್ಡರೆ? ಎಂದರೆ ಅದೂ ಅಲ್ಲ. ಹೀಗೆ ಅವರಿಬ್ಬರನ್ನು ದಡ್ಡರು ಎಂದು ನಾವು ಹೇಳುವುದೇ ತಪ್ಪು ಅಲ್ಲವೇ.!
ಇತ್ತೀಚೆಗೆ ನಾನು ಓದಿದ ರಶ್ಮಿ ಬನ್ಸಲ್ ಅವರು ಬರೆದ
“ಸ್ಟೇ ಹಂಗ್ರಿ ಸ್ಟೇ ಫುಲಿಶ್” ಎಂಬ ಪುಸ್ತಕದ ಕುರಿತು ಹೇಳುವುದಾದರೆ ಪುಸ್ತಕದ ಶೀರ್ಷಿಕೆಯೇ ಹಲವು ವಿಷಯಗಳನ್ನು ತಿಳಿಸಿಕೊಡುತ್ತದೆ. ಸ್ಟೇ ಹಂಗ್ರಿ ಯಾವಾಗಲೂ ಹಸಿವಿನಿಂದಿರು ಸ್ಟೇ ಪುಲಿಶ್ ಯಾವಾಗಲೂ ದಡ್ಡನಾಗಿರು ಎಂದು ಮೇಲ್ನೋಟಕ್ಕೆ ಅರ್ಥೈಸುವ ಈ ಶೀರ್ಷಿಕೆ ಮೂಲದಲ್ಲಿ ಅತ್ಯಂತ ಆಳವಾದ ಅರ್ಥವನ್ನು ಹೊಂದಿದೆ. ಸ್ಟೇ ಹಂಗ್ರಿ ಎಂದರೆ ಜ್ಞಾನಕ್ಕಾಗಿ ಹಸಿದಿರು… ಜ್ಞಾನದ ಹಸಿವನ್ನು ಹೊಂದಿರು ಎಂದರ್ಥ. ಸ್ಟೇ ಪುಲಿಶ್ ಎಂದರೆ ಎಲ್ಲವನ್ನು ಅರಿಯುವ ನಿಟ್ಟಿನಲ್ಲಿ ದಡ್ಡನಾಗಿರು ಎಂದರ್ಥ.
ಈ ಹಿಂದೆ ನಾವು ಸ್ನೇಹಿತರಿಗೆ ಸಂಬಂಧಿಗಳಿಗೆ ಪತ್ರವನ್ನು ಬರೆದು ವಿಷಯಗಳನ್ನು ತಿಳಿಸುತ್ತಿದ್ದೆವು ಪ್ರಾರಂಭದಲ್ಲಿ ಪ್ರೀತಿಯ, ಪೂಜ್ಯ ಎಂದೆಲ್ಲಾ ಅವರವರ ಘನತೆಗೆ ತಕ್ಕಂತೆ ಆರಂಭಿಸಿ ಹಿರಿಯರಾಗಿದ್ದರೆ ನಮಸ್ಕಾರ, ಕಿರಿಯರಾಗಿದ್ದರೆ ಹಾರೈಕೆಗಳನ್ನು ಹೇಳಿ

ಆರಂಭವಾಗುವ ಪತ್ರ ಕ್ಷೇಮ ಸಮಾಚಾರದ ನಂತರ ವಿಷಯಕ್ಕೆ ಬಂದು ಮತ್ತೊಮ್ಮೆ ಉಭಯ ಕುಶಲೋಪರಿ ಸಾಂಪ್ರತ ಎಂದು ಹೇಳಿ ಮರಳಿ ಪತ್ರ ಬರೆಯಲು ಕೋರಿಕೊಂಡು ಇಂತಿ ನಿಮ್ಮ ಎಂದು ಸಹಿ ಹಾಕಿ ದಿನಾಂಕ ಮತ್ತು ವಿಳಾಸವನ್ನು ಬರೆದು ಹಾಕುತ್ತಿದ್ದೆವು. ಆದರೆ ಬದಲಾದ ಕಾಲಘಟ್ಟದಲ್ಲಿ ನಮ್ಮ ಪತ್ರ ವ್ಯವಹಾರಗಳು ನಿಂತು ಹೋಗಿದ್ದು ಸಂವಹನದ ಶೈಲಿಯೇ ಬದಲಾಗಿ ಹೋಗಿದೆ.
ಈ ಹಿಂದೆ ಬ್ಯಾಂಕಿನಲ್ಲಿ ಟೋಕನ್ ಪಡೆದುಕೊಂಡು ನಮ್ಮ ಪಾಳಿಗಾಗಿ ಕಾಯುತ್ತಾ ನಿಲ್ಲುತ್ತಿದ್ದುದು ಇದೀಗ ನೆನಪು ಮಾತ್ರ.. ಅಂತರ್ಜಾಲದ ನೆರವಿನಿಂದ ಆನ್ಲೈನ್ ನಲ್ಲಿ ಹಣವನ್ನು ವರ್ಗಾಯಿಸುವ ಕಾಲವಿದು. ಅಂತರ್ಜಾಲವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತಿ ದೊಡ್ಡ ಬದಲಾವಣೆಯನ್ನು ತಂದಿದೆ.
ಈ ಹಿಂದೆ ಯಾವುದಾದರೂ ವಿಷಯದ ಕುರಿತು ಮಾಹಿತಿಯನ್ನು ಹೆಕ್ಕಲು ಸಂಬಂಧ ಪಟ್ಟ ಹಲವಾರು ಪುಸ್ತಕಗಳನ್ನು ಕಲೆಹಾಕಿ ಓದಬೇಕಾಗುತ್ತಿತ್ತು ಇಲ್ಲವೇ ಪ್ರಾಜ್ಞರಿಂದ ವಿಷಯದ ಕುರಿತು ಮಾಹಿತಿ ಪಡೆಯಬೇಕಾಗುತ್ತಿತ್ತು, ಆದರೆ ಇಂದು ನಮ್ಮ ಅಂಗೈಯಲ್ಲಿರುವ ಪುಟ್ಟ ಆಂಡ್ರಾಯ್ಡ್ ಮೊಬೈಲ್ ಹ್ಯಾಂಡ್ ಸೆಟ್ ಜಗತ್ತಿನ ಎಲ್ಲ ಮಾಹಿತಿಗಳನ್ನು ಕ್ಷಣಮಾತ್ರದಲ್ಲಿ ನಮ್ಮ ಮಡಿಲಿಗೆ ತಂದು ಹಾಕುತ್ತದೆ.
ಹೀಗೆ ಬದಲಾವಣೆಯ ಪರ್ವ ಹಂತ ಹಂತವಾಗಿ ನಮ್ಮನ್ನು ಮುನ್ನಡೆಸುತ್ತಿದೆ.. ಆಶ್ಚರ್ಯ ಎನಿಸಿದರೂ ಜಗತ್ತು ನಡೆಯುವುದು ನಿರಂತರ ಬದಲಾವಣೆಯ ಬಲದಿಂದಲೇ ಎಂಬುದು ಸುಳ್ಳಲ್ಲ.
ಇದೀಗ ನಮ್ಮ ಮುಂದಿರುವ ಸವಾಲು ಅತ್ಯಂತ ಸುಲಭವಾದದ್ದು… ನಮ್ಮ ಪ್ರಯತ್ನ ಶೀಲತೆಯ ಮೂಲಕ ನಾವು ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುತ್ತಲೇ ಹೋಗಬೇಕು, ಇದರಿಂದ ನಮ್ಮ ಜಾಣ್ಮೆ ಹೆಚ್ಚಾಗುತ್ತದೆ. ಹೊಸ ವಿಷಯಗಳು ಅರಿವು ನಮ್ಮ ಜ್ಞಾನದ ಹರಹನ್ನು ವಿಸ್ತಾರಗೊಳಿಸುತ್ತದೆ. ಇದು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅನ್ವಯಿಸುತ್ತದೆ ಹೊಸ ಹೊಸ ವಿಷಯಗಳನ್ನು ಕಲಿಯಲು ನಮ್ಮ ಮನಸ್ಸನ್ನು ಹದವಾಗಿರಿಸಿಕೊಳ್ಳಬೇಕು.
ಹೀಗೆ ಮನಸ್ಸನ್ನು ಹದವಾಗಿ ಇರಿಸಿಕೊಳ್ಳಲು ಮುಖ್ಯವಾಗಿ ನಾವು ಮಾಡಬೇಕಾದದ್ದು ನಮಗೆ ಎಲ್ಲವೂ ಗೊತ್ತಿದೆ ಎಂಬ ಅಹಂ ಭಾವವನ್ನು ತೊರೆಯುವುದು. ಎಲ್ಲವೂ ಗೊತ್ತಿದೆ ಎಂದು ನಮ್ಮ ಮೆದುಳಿನ ಕೊಡವನ್ನು ಅಹಂಭಾವದ ನೀರಿನಿಂದ ತುಂಬಿದರೆ ಜ್ಞಾನದ ಅಮೃತಕ್ಕೆ ಜಾಗವೆಲ್ಲಿ ದೊರೆಯುವುದು?
ಎಷ್ಟೋ ಬಾರಿ ನಾವು ಹಿರಿತನದ ಗರಿಮೆಯಿಂದ ಯಾರಾದರೂ ನಮಗೆ ಯಾವುದಾದರೂ ವಿಷಯವನ್ನು ಹೇಳುತ್ತಿರುವಾಗ ಅದನ್ನು ಅರ್ಧದಲ್ಲಿಯೇ ತಡೆದು ನನಗೆ ಹೇಳುವಷ್ಟು ದೊಡ್ಡವನಾದೆಯ!? ಎಂದೋ ಇಲ್ಲವೇ ನನಗೆ ಹೇಳಲು ನಿನಗೆಷ್ಟು ಧೈರ್ಯ? ಎಂಬಂತಹ ಮಾತುಗಳನ್ನು ಆಡುತ್ತೇವೆ, ಆದರೆ ನಿಜ ಹೇಳಬೇಕೆಂದರೆ ಒಂದು ಮನೆಯಲ್ಲಿ ಮೂರು ತಲೆಮಾರಿನ ಜನರಿದ್ದರೆ ತಂದೆಯಾದ ವ್ಯಕ್ತಿ ತನ್ನ ಮಕ್ಕಳ ಮುಂದೆಯೇ ತನ್ನ ಪಾಲಕರಿಂದ ಬುದ್ಧಿವಾದ ಹೇಳಿಸಿಕೊಳ್ಳಬಹುದಾದಂತಹ ಪ್ರಸಂಗಗಳು ಬರುತ್ತವೆ. ತಂದೆ ತನ್ನ ಮಗನಿಗೆ ಮೊಮ್ಮಗನ ಮುಂದೆ ನೀನು ದಡ್ಡ ಎಂದು ಹೇಳಬಹುದು ಹಾಗಾದರೆ ಇಲ್ಲಿ ಜಾಣರಾರು? ಎಂಬ ಪ್ರಶ್ನೆ ನಮಗೆ ತೋಚಿದರೆ ತಿಳಿಯಬೇಕೆಂಬ ಹಂಬಲವನ್ನು ಹೊತ್ತು ಎಲ್ಲವನ್ನೂ ತಿಳಿದುಕೊಳ್ಳಬೇಕೆಂಬ ವ್ಯಕ್ತಿ ದಡ್ಡರಂತೆ ತೋರಿದರೆ ಅದು ಅವರ ತಪ್ಪಲ್ಲ. ಅವರಲ್ಲಿರುವ ಜ್ಞಾನದ ದಾಹ ಅವರನ್ನು ದಡ್ಡರಂತೆ ಬಿಂಬಿಸುತ್ತದೆ ಮಾತ್ರ. ನನಗೇನೂ ಗೊತ್ತಿಲ್ಲ! ಎಂಬುದರಲ್ಲಿಯೇ ಅವರಿಗೆ ಎಲ್ಲವನ್ನು ತಿಳಿಯುವ ಬಯಕೆ ಇದೆ ಎಂಬ ಪರಮ ಸತ್ಯದ ಅರಿವಾಗುತ್ತದೆ
ಈ ಹಿಂದೆ ಪ್ರತಿಯೊಬ್ಬರು ಮನೆಗೆ ತರಿಸುವ ದಿನ ಪತ್ರಿಕೆಯನ್ನು ಓದಿ ಆಯಾ ಭಾಗಗಳಲ್ಲಿ ಆಗಿರಬಹುದಾದ ಘಟನೆಗಳ ಜ್ಞಾನವನ್ನು ಪಡೆಯುತ್ತಿದ್ದರು. ಮನೆಗೆ ಬರುತ್ತಿದ್ದ ವಾರಪತ್ರಿಕೆ ಮಾಸಿಕ ಪತ್ರಿಕೆಗಳು ನಮ್ಮ ಪ್ರಾಪಂಚಿಕ ಜ್ಞಾನದ ಅರಿವನ್ನು ಹೆಚ್ಚಿಸುತ್ತಿದ್ದವು.
ಜ್ಞಾನದ ಹಸಿವು, ಕಲಿಕೆಯ ಹಸಿವು ಮತ್ತು ಹೊಸ ವಿಷಯಗಳನ್ನು ಅರಿಯುವ ಹಸಿವನ್ನು ಹೊಂದಿರುವ ದಡ್ಡರು ನಾವಾಗಲೇಬೇಕು. ಯಾವ ವ್ಯಕ್ತಿ ತುಂಬು ಹೃದಯದಿಂದ ಹೊಸ ವಿಷಯಗಳನ್ನು ಕಲಿಯುತ್ತಾನೆಯೋ ಆತ ಖಂಡಿತವಾಗಿಯೂ ತನ್ನ ಜಾಣ್ಮೆಯನ್ನು ಹೆಚ್ಚಿಸಿಕೊಳ್ಳುತ್ತಾನೆ.
ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಿಂದ ಮನುಷ್ಯನಲ್ಲಿ ಅನುಭವ ಹೆಚ್ಚಾಗುತ್ತದೆ. “ಅನುಭವದಲ್ಲಿ ಅಮೃತತ್ವ” ಎಂಬ ನಮ್ಮ ಹಿರಿಯರ ಮಾತು ಸ್ಮರಣೀಯವಾದುದು.
ಕೆಲ ವರ್ಷಗಳ ಹಿಂದೆ ದೂರದ ಊರುಗಳಲ್ಲಿ ಕುಳಿತು ಯಾರೋ ಪಾಠ ಹೇಳಿದರೆ ಬೇರೊಂದು ಊರಿನ ಮತ್ತೊಂದು ಕೋಣೆಯಲ್ಲಿ ಕುಳಿತ ವಿದ್ಯಾರ್ಥಿಗಳು ಆ ಪಾಠವನ್ನು ಆಲಿಸಬಲ್ಲರು ಎಂಬ ವಿಷಯ ಕೇಳಿದ ಜನ ಅದೊಂದು ಬಹುದೊಡ್ಡ ಚೋದ್ಯ ಎಂಬಂತೆ ನಗುತ್ತಿದ್ದರು, ಆದರೆ 2019ರ ಕೊರೋನಾ ಸಂಕಷ್ಟದ ಸಮಯದಲ್ಲಿ ಆನ್ಲೈನ್ ಪಾಠಗಳು ಮೀಟಿಂಗ್ ಗಳು ಸಭೆ ಸಮಾರಂಭಗಳು ನಡೆದವು. ಇದೆಲ್ಲಕ್ಕೂ ಅಂದು ನಕ್ರ ಜನರೇ ಸಾಕ್ಷಿಯಾಗಿದ್ದರು.
ಹೊಸ ವಿಷಯಗಳನ್ನು ಕಲಿಯುವಾಗ ಸಹಜವಾಗಿಯೇ ಮನುಷ್ಯನಲ್ಲಿ ಹಿಂಜರಿಕೆ ಇರುತ್ತದೆ, ಆದರೆ ಆ ಹಿಂಜರಿಕೆಗೆ ಹೆಚ್ಚು ಅವಕಾಶ ಮಾಡಿಕೊಡದೆ
ಹೊಸ ಹೊಸ ವಿಷಯಗಳನ್ನು ತಂತ್ರಜ್ಞಾನಗಳನ್ನು ಕಲಿಯುವ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಅವಕಾಶಗಳನ್ನು ಪಡೆಯಬೇಕು.
ನಾವೇ ಹಾಕಿಕೊಳ್ಳದ ಹೊರತು ಕಲಿಕೆಗೆ ಯಾವುದೇ ರೀತಿಯ ಅಡೆತಡೆಗಳು ಇಲ್ಲ. ಆಧುನಿಕ ಸೌಲಭ್ಯಗಳು ಮನುಷ್ಯನ ಬಳಕೆಗಾಗಿಯೇ ಇದ್ದು ಅವುಗಳನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಮನುಷ್ಯ ಬೆಳೆಯಬೇಕು. ಸತತವಾದ ಕಲಿಕೆ ಮನುಷ್ಯನ ಬೆಳವಣಿಗೆಗೆ ರಹದಾರಿಯನ್ನು ಒದಗಿಸುತ್ತದೆ.


