ಬಿಜೆಪಿ ಯುವ ಮೋರ್ಚಾ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಹೊಸ ತಾಲೂಕು ಘೋಷಿಸಿದರೂ, ಆಲಮೇಲ ಜನತೆಗೆ ಸರ್ಕಾರ ಹಾಗೂ ಇಲಾಖೆಗಳಿಂದ ದೊರೆಯುತ್ತಿರುವುದು ಮಾತ್ರ ಭರವಸೆಗಳು, ಸೌಲಭ್ಯಗಳು ಅಲ್ಲ. ವಿಶೇಷವಾಗಿ ರಸ್ತೆ ಸಾರಿಗೆ ವಿಚಾರದಲ್ಲಿ ಜನರು ಪ್ರತಿದಿನ ಅನುಭವಿಸುತ್ತಿರುವ ಕಷ್ಟವು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ಮತ್ತು ಆಡಳಿತದ ತೀವ್ರ ವೈಫಲ್ಯವನ್ನು ಬಯಲಿಗೆಳೆಯುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಆರೋಪಿಸಿದ್ದಾರೆ.
ಶುಕ್ರವಾರ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಆಲಮೇಲದಲ್ಲಿ ಸಂಜೆ 7 ಗಂಟೆಯ ನಂತರ ಆಲಮೆಲ್ ರಸ್ತೆ ಮಾರ್ಗದಲ್ಲಿ ಬಸ್ ಸೌಲಭ್ಯವೇ ಇಲ್ಲದಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಪಾಯ, ಮಹಿಳೆಯರ ಸುರಕ್ಷತೆಗೆ ಧಕ್ಕೆ, ಉದ್ಯೋಗಿಗಳ ಸಂಚಾರಕ್ಕೆ ಅಡಚಣೆ, ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ದೊರೆಯದ ಸ್ಥಿತಿ ಎಂಬ ಗಂಭೀರ ಪರಿಸ್ಥಿತಿಯನ್ನು ಉಂಟುಮಾಡಿದೆ. ಇದು ಹೊಸ ತಾಲೂಕಿಗೆ ಬೇಕಾದ ಮೂಲಭೂತ ಸೌಕರ್ಯಗಳತ್ತ ಸರ್ಕಾರ ತೋರಿಸಿರುವ ಪರಮ ನಿರ್ಲಕ್ಷ್ಯಕ್ಕೆ ಸ್ಪಷ್ಟ ನಿದರ್ಶನ ವಾಗಿದೆ ಎಂದಿದ್ದಾರೆ.
ಆಲಮೇಲಿನಿಂದ ಹತ್ತಿರದಲ್ಲಿರುವ ಅಫಜಲ್ಪುರ್, ಸಿಂದಗಿ, ಇಂಡಿ ಬಸ್ ಡಿಪೋಗಳು ತಕ್ಷಣ ಸಭೆ ಸೇರಿ, ರಾತ್ರಿ 8:00, 9:00 ಮತ್ತು 10:00 ಗಂಟೆಗಳ ಬಸ್ ಸೌಲಭ್ಯವನ್ನು ಆರಂಭಿಸುವಂತೆ ಕೆಎಸ್ಸಾರ್ಟಿಸಿ ಗೆ ನಾವು ಸ್ಪಷ್ಟ ಹಾಗೂ ಕಠಿಣ ಬೇಡಿಕೆ ಸಲ್ಲಿಸುತ್ತೇವೆ. ಈಗಲೂ ಈ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಿದಿದ್ದರೆ ಆಲಮೆಲ್ ಪಟ್ಟಣ ಹಾಗೂ ಸುತ್ತಲಿನ ಎಲ್ಲಾ ಹಳ್ಳಿಗಳು ಒಗ್ಗೂಡಿ, ಸರ್ಕಾರದ ಈ ನಿರ್ಲಕ್ಷ್ಯಕ್ಕೆ ಗಟ್ಟಿತನದ ಉತ್ತರ ಕೊಡಲು ರಸ್ತೆ ಬಂದ್ ಸೇರಿದಂತೆ ಹೋರಾಟದ ತೀವ್ರ ರೂಪಗಳನ್ನು ಒಡ್ಡಲಾಗುವುದೆಂದು ಬಸವರಾಜ ಹೂಗಾರ ಎಚ್ಚರಿಕೆ ನೀಡಿದ್ದಾರೆ.

