ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಕಾಂಗ್ರೆಸ್ ವಿಸರ್ಜನೆ ಮಾಡಬೇಕು ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು, ಆದರೆ ಕಾಂಗ್ರೆಸ್‌ನವರು ಗಾಂಧೀಜಿ ಅವರ ಆಶಯದಂತೆ ನಡೆದುಕೊಂಡರೇ? ಅವರ ಒಂದೇ ಒಂದು ಕನಸನ್ನು ಕಾಂಗ್ರೆಸ್ ನನಸು ಮಾಡಿಲ್ಲ, ಅಶಿಸ್ತಿನ ರೀತಿಯಲ್ಲಿ ಅಂಗಿ-ಚಡ್ಡಿ ಹಾಕುವ ಹುಡುಗನಿಂದ ಕಾಂಗ್ರೆಸ್ ನಾಯಕತ್ವನ್ನು ಯಾರು ಒಪ್ಪಿಕೊಳ್ಳುತ್ತಾರೆ, ಈ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದು ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಖಾರವಾದ ಶಬ್ದಗಳಲ್ಲಿ ವಾಗ್ದಾಳಿ ನಡೆಸಿದರು.
ಬಿಜೆಪಿ ನರೇಗಾ ಯೋಜನೆಯ ಹೆಸರು ಬದಲಿಸಿ ಗಾಂಧೀಜಿ ಅವರ ಆಶಯಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ ಸಂಸದ ಜಿಗಜಿಣಗಿ ಅನೇಕ ಸವಾಲುಗಳನ್ನು ಕೇಳುವ ಮೂಲಕ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯಗಳನ್ನು ಕುರಿತು ಮಾತನಾಡಿದ ಅವರು, ಗಾಂಧೀಜಿ, ಡಾ.ಅಂಬೇಡ್ಕರ ಅವರಂತಹ ಮಹಾನ್ ಚೇತನರನ್ನು ಅವಮಾನ ಮಾಡಿದ್ದೆ ಕಾಂಗ್ರೆಸ್, ಈಗ ಆಡಳಿತಾರೂಢ ಬಿಜೆಪಿ ಕೇಂದ್ರದಲ್ಲಿ ಉತ್ತಮವಾದ ಆಡಳಿತ ನಡೆಸುತ್ತಿದೆ, ಹೀಗಾಗಿ ಈ ಯೋಜನೆಗಳ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ಹೊಟ್ಟೆ ಉರಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ನರೇಗಾ ಯೋಜನೆಗೆ ಯಾವುದೇ ಚೌಕಟ್ಟು ಇರಲಿಲ್ಲ. ಈಗ ರಾಮ್ ಜಿ ಹೆಸರಿನಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ಹಾಗೂ ಜನರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಮೋದಿ ಮಾಡಿದ್ದಾರೆ. ಕೇಂದ್ರ, ರಾಜ್ಯ ರಾಜ್ಯಗಳ ಸಹಯೋಗದಲ್ಲಿ ಯೋಜನೆಯನ್ನು ಜಾರಿ ಮಾಡುತ್ತಿತ್ತು. ಈ ಹಿಂದೆ ರಾಜ್ಯ ಸರ್ಕಾರಗಳು ಅನುದಾನ ಕೊಡುತ್ತಿರಲಿಲ್ಲ. ಈಗ ೬೦-೪೦ ಅನುದಾನದ ಪಾಲನ್ನು ಕಡ್ಡಾಯ ಮಾಡಲಾಗಿದೆ ಎಂದರು.
ಈ ಹಿಂದೆ ಯೋಜನೆಗೆ ಲೆಕ್ಕಾಚಾರ ಇರುತ್ತಿಲ್ಲ. ಖೊಟ್ಟಿ ಹೆಸರನ್ನು ತೋರಿಸಿ ಅನುದಾನ ದುರ್ಬಳಕೆ ಮಾಡಲಾಗುತ್ತಿತ್ತು. ಈಗ ಇದಕ್ಕೆ ಕಡಿವಾಣ ಬೀಳಲಿದೆ ಎಂದರು.
ರಾಜ್ಯದ ಸಹಕಾರ ಇಲ್ಲದ ಕಾರಣಕ್ಕೆ ಶಿಸ್ತುಬದ್ಧವಾದ ನಿಯಮಗಳನ್ನು ಜಾರಿಗೆ ತರಲಾಗಿದೆ. ಮಹಾತ್ಮಾಗಾಂಧಿಜೀ ಅವರ ಕನಸಿನಂತೆ ಕಾನೂನಿನ ತಿದ್ದುಪಡಿ ಮಾಡಲಾಗಿದೆ ಎಂದರು.
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟಕ್ಕೆ ನಾನು ಬೆಂಬಲ ಸೂಚಿಸಿದ್ದೆ, ಹೋರಾಟಗಾರರ ಮೇಲಿನ ಕೇಸ್ ತೆಗೆಯಬೇಕು. ಎಂದು ಒತ್ತಾಯಿಸಿದರು.
ಕಾಯ್ದೆ ಬಗ್ಗೆ ಕಾಂಗ್ರೆಸ್‌ಗೆ ಅರಿವಿನ ಕೊರತೆ
ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ರವಿ ವಗ್ಗೆ ಮಾತನಾಡಿ, ನರೇಗಾ ಯೋಜನೆಯಡಿ ಈ ಹಿಂದೆ ೧೦೦ ದಿನಗಳ ಮಾನವ ದಿನಗಳು ಮಾತ್ರ ಇತ್ತು. ಈಗ ೧೨೫ ದಿನಗಳಿಗೆ ಹೆಚ್ಚಿಸಲಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಕೂಲಿ ಪಾವತಿಯಲ್ಲಿ ವಿಳಂಬ ಮಾಡದೆ ನಿರ್ದಿಷ್ಟವಾದ ದಿನಗಳಲ್ಲಿ ಪಾವತಿ ಮಾಡಬೇಕು. ಈ ಹಿಂದೆ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಿತ್ತು. ಈಗ ಯೋಜನೆಗೆ ಪಾರದರ್ಶಕ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.
ಕಾಯ್ದೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಕಾಂಗ್ರೆಸ್‌ನವರು ವಿರೋಧಿಸುತ್ತಿದ್ದಾರೆ. ಕೇಂದ್ರದಿಂದ ಬರುವ ಹಣವನ್ನು ರಾಜ್ಯ ಸರ್ಕಾರಗಳಲ್ಲಿ ದುರುಪಯೋಗ ಮಾಡಿಕೊಳ್ಳುತ್ತಿದ್ದವು, ಇದೀಗ ಅದಕ್ಕೆ ಬ್ರೇಕ್ ಬೀಳುವುದರಿಂದ ಬಿಜೆಪಿಯೇತರ ರಾಜ್ಯ ಸರ್ಕಾರಗಳು ವಿರೋಧಿಸುತ್ತಿವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಲರಾಜರೆಡ್ಡಿ, ಜಿ.ಪಂ. ಮಾಜಿ ಸದಸ್ಯ ಸಾಬು ಮಾಶ್ಯಾಳ, ಮಾದ್ಯಮ ಪ್ರಮುಖ ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸಿದ್ಧರಾಮಣ್ಣ ನಮ್ಮ ಜೊತೆಗಿದ್ದಾಗ ಒಳ್ಳೆಯವನಿದ್ದ
ಸಿದ್ಧರಾಮಣ್ಣ ನನಗೂ ಆತ್ಮೀಯ, ನಮ್ಮ ಜೊತೆಗಿದ್ದಾಗ ಬಹಳ ಒಳ್ಳೆಯವನಿದ್ದ, ಕಾಂಗ್ರೆಸ್ ಸೇರಿದ ಮೇಲೆ ಭಯಂಕರವಾಗಿ ಕೆಟ್ಟಿದ್ದಾನೆ,
ಕಾಂಗ್ರೆಸ್ ನಲ್ಲಿ ವಿಪರೀತವಾಗಿ ಟಗರು, ಕೋಣನ ಕುಸ್ತಿ ನಡೆದಿದೆ. ನಿರ್ಣಯ ಏನು ಮಾಡಬೇಕು ಎಂಬುದು ಅವರಿಗೆ ತಿಳಿಯುತ್ತಿಲ್ಲ, ಅವನೇ ಉಳಿಯುತ್ತಾನೋ ಇಲ್ಲವೋ ಎಂಬುದು ಗೊತ್ತಿಲ್ಲ. ಈ ಬಗ್ಗೆ ಉಸ್ತುವಾರಿ ಮಂತ್ರಿಗಳನ್ನು, ಕಾಂಗ್ರೆಸ್ ನಾಯಕರನ್ನು ಕೇಳಿ ಅವರ ವಿಷಯ ನನಗೇನೂ ಗೊತ್ತು ಎಂದು ಸಂಸದ ಜಿಗಜಿಣಗಿ ಹೇಳಿದರು.
ದೀಪ ಆರುವಾಗ ಉರಿಯುತ್ತದೆ
ಕಾಂಗ್ರೆಸ್ ಪಕ್ಷ ಸರ್ವನಾಶವಾಗುತ್ತದೆ, ಕಾಂಗ್ರೆಸ್ ದೇಶದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂಡಿಗೆ ಬಂದು ೪ ಸಾವಿರ ಕೋಟಿ ಕೊಡುತ್ತೇನೆ ಎಂದರು. ವಿಜಯಪುರಕ್ಕೆ ಬಂದು ೮೦೦ ಕೋಟಿ ಕೊಡುತ್ತೇನೆ ಎಂದು ಹೇಳಿದರೂ ಆದರೆ ಯಾವ ಅನುದಾನವನ್ನೂ ಕೊಡಲಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ಹೊರಹಾಕಿದರು.

