ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿ ಆಯುರ್ವೇದ ಹಾಗೂ ಯುನಾನಿ ವೈದ್ಯಕೀಯ ಪದ್ಧತಿ ಶಿಕ್ಷಣ ಪಡೆದು ಹಳೆ ಕೊಲ್ಹಾರದಲ್ಲಿ ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆ
ಸಲ್ಲಿಸುವ ಮೂಲಕ ಬಡವರ ವೈದ್ಯರೆಂದೇ ಖ್ಯಾತರಾಗಿದ್ದ
ಡಾ.ಬಸಯ್ಯ ಈರಯ್ಯ ಗಣಕುಮಾರಮಠ ಅವರ 10ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಜ.15ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಯುಕೆಪಿ ಬಳಿಯಿರುವ ಗುರುಲಿಂಗಪ್ಪ ಬಾಟಿಯವರ ತೋಟದಲ್ಲಿ ನಡೆಯಲಿದೆ.
1935 ಜುಲೈ 1 ರಂದು ಜನಿಸಿದ ಇವರು ವೈದ್ಯಕೀಯ ಸೇವೆಯ ಜೊತೆ ಜೊತೆಗೆ ತಮ್ಮನ್ನು ತಾವು ಹೆಚ್ಚಾಗಿ ಗ್ರಾಮದ ಹಾಗೂ ಗ್ರಾಮಸ್ಥರ ಒಳತಿಗಾಗಿ ಸದಾ ಸಮಾಜಮುಖಿ ಸೇವೆಗಳಲ್ಲಿಯೇ ತೊಡಗಿಸಿಕೊಳ್ಳುತ್ತಿದ್ದರು. 10 ವರ್ಷಗಳ ಕಾಲ ಗ್ರಾ.ಪಂ.
ಸದಸ್ಯರಾಗಿ ಗ್ರಾಮದ ಸರ್ವಾಂಗಿನ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
ಅಲ್ಲದೇ ಸಂಘ ಪರಿವಾರದಲ್ಲಿ ಗುರುತಿಸಿಕೊಂಡು ಸುಮಾರು 38 ವರ್ಷಗಳ ಕಾಲ ಆರ್ ಎಸ್ ಎಸ್ ಬಸವ ಬಾಗೇವಾಡಿ ತಾಲೂಕಿನ ಸಂಘ ಚಾಲಕರಾಗಿದ್ದರು. ಇವರು 1967 ರಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದಿಂದ 1972 ರಲ್ಲಿ ಹೂವಿನ ಹಿಪ್ಪರಗಿ ಮತಕ್ಷೇತ್ರಗಳಿಂದ ಜನಸಂಘದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ದೇಶದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತಮ್ಮ ಆಸ್ಪತ್ರೆ ಬಂದ ಮಾಡಿ ಸುಮಾರು ಎರಡು ವರ್ಷಗಳ ಕಾಲ ಹೋರಾಟ ಮಾಡಿದ್ದರು. ಇವರನ್ನು ಬಂಧಿಸಿದ ದಿನವೇ ತುರ್ತು ಪರಿಸ್ಥಿತಿ ಹಿಂಪಡೆಯಲಾಗಿತ್ತು. ಜ.15, 2016ರಲ್ಲಿ ಲಿಂಗೈಕ್ಯರಾದರು.

