ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮಹಿಳೆಯರನ್ನು ಜಾಗ್ರತಗೊಳಿಸುವ ಪ್ರಯತ್ನವೇ ಸಪ್ತ ಶಕ್ತಿಸಂಗಮ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ನಿವೃತ್ತ ಶಿಕ್ಷಕಿ ಮಹಾದೇವಿ ಕಂಠಿ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಾತೃ ಭಾರತಿ ಮಹಿಳಾ ಘಟಕದಲ್ಲಿ ವಿದ್ಯಾ ಭಾರತಿ ಸೂಚಿಸಿದ ಪ್ರಕಾರ ಆಯೋಜಿಸಿರುವ ಸಪ್ತ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಗಿ ಅವರು ಮಾತನಾಡಿದರು.
ಭಗವದ್ಗೀತೆಯ ೧೦ನೇ ಅಧ್ಯಾಯದ ೩೪ನೇ ಶ್ಲೋಕದಲ್ಲಿ ಹೇಳಿರುವಂತೆ ಒಬ್ಬ ಮಹಿಳೆಯಲ್ಲಿ ಕೀರ್ತಿ, ಐಶ್ವರ್ಯ, ವಾಕ್ ಶಕ್ತಿ, ಸ್ಮರಣ ಶಕ್ತಿ, ಬುದ್ಧಿಶಕ್ತಿ, ದೃಢತೆ ಮತ್ತು ತಾಳ್ಮೆ ಎಂಬ ಏಳು ಸದ್ಗುಣಗಳು ಅಡಗಿದ್ದು ಅದನ್ನು ಜಾಗ್ರತಗೊಳಿಸುವ ಕೆಲಸವಾಗ ಬೇಕಾಗಿದೆ. ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎನ್ನುವ ಗಾಧೆಮಾತನ್ನು ನೋಡಿದಾಗ ಸಂಸ್ಕಾರ ಪ್ರವಹಿಸುವಲ್ಲಿ ಮಾತೆಯ ಪಾತ್ರವೆ ಮುಖ್ಯವಾಗಿದೆ. ಸಮಾಜ ವ್ಯವಸ್ಥೆಯಲ್ಲಿ ಸ್ತ್ರೀ ಯು ಪ್ರಧಾನವಾಗಿರುವುದನ್ನು ಪುರಾಣದಿಂದ ಹಿಡಿದು ಇತಿಹಾಸದ ಪುಟಪುಟಗಳನ್ನ ತೆಗೆದುನೋಡುತ್ತಾ ಬಂದರೆ ಸಾಕಷ್ಟು ನಿದರ್ಶನಗಳು ದೊರೆಯುತ್ತದೆ. ಅದನ್ನು ನಾವು ತಿಳಿದುಕೊಂಡು ನಮ್ಮ ಮನೆಯ ಮಕ್ಕಳಿಂದ ಹಿಡಿದು ಸಮಾಜ ತಿದ್ದುವ ಕಾರ್ಯ ಮಾಡಬೇಕಾಗಿದೆ ಎಂದರು.
ಆಂಗ್ಲ ಮಾಧ್ಯಮ ಮುಖ್ಯಗುರು ಮಾತೆ ರಂಜಿತಾ ಭಟ್ಟ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಾತೃ ಭಾರತಿ ಘಕಟ ಸಂಯೋಜಕರಾದ ಅನ್ನಪೂರ್ಣ ನಾಗರಾಳ ಅಧ್ಯಕ್ಷತೆಯನ್ನು ವಹಿಸಿ ಪಂಚಪರಿವರ್ತನೆಯ ಮೇಲೆ ಮಾತನಾಡಿದರು. ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಸರಸ್ವತಿ ಮಡಿವಾಳರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಇಂದು ನಾಯಕ ಸ್ವಾಗತಿಸಿದರು. ಶಿಕ್ಷಕಿ ಮೀನಾಕ್ಷಿ ಗಣಾಚಾರಿ ವಂದಿಸಿದರು.

