ಉದಯರಶ್ಮಿ ದಿನಪತ್ರಿಕೆ
ಹೊನವಾಡ: ಹಲವು ದಶಕಗಳ ಹಿಂದೆ ಹಳ್ಳಿಗಳಲ್ಲಿ ನಡೆಯುತ್ತಿದ್ದ ಸಂಪ್ರದಾಯ, ಬೀಸುವುದು, ಕುಟ್ಟುವುದು ಸೇರಿದಂತೆ ಜಾನಪದ ನೃತ್ಯ, ಬಯಲಾಟಗಳಂತಹ ಮನರಂಜನೆ ಈಗ ನೋಡಲು ಸಿಗುವುದೇ ಅಪರೂಪ. ಅಂಥ ಹಳ್ಳಿ ಸೊಗಡು ಸ್ಥಳೀಯ ತಿಕೋಟಾ ತಾಲ್ಲೂಕಿನ ಹೊನವಾಡ ಬಸವಂತರಾಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಮರುಕಳಿಸುವಂತೆ ಮಾಡಿದ್ದು ಸಂಸ್ಕೃತಿ ಹಬ್ಬ.
ಮಕರ ಸಂಕ್ರಮಣದ ಪ್ರಯುಕ್ತ ಗುಡಿಸಲು ನಿರ್ಮಾಣ ಮಾಡಿ ಹೂವು, ಕಬ್ಬು, ವಿವಿಧ ಧಾನ್ಯಗಳೊಂದಿಗೆ ಬಸವಂತರಾಯ ಪ್ರೌಢ ಶಾಲೆಯ ಸಮಾರಂಭದ ಬಯಲು ವೇದಿಕೆಯನ್ನು ಅಲಂಕರಿಸಲಾಗಿತ್ತು. ಹಳ್ಳಿಯ ಸಂಸ್ಕೃತಿ ಸೊಗಡು ಎಲ್ಲೆಡೆ ಎದ್ದು ಕಾಣುತ್ತಿತ್ತು.
ಶಿಕ್ಷಕರಾದ ಐ ಕೆ ನದಾಫ ಮಾತನಾಡಿ, ಜಗತ್ತನ್ನು ಬೆಳಗುವ ಸೂರ್ಯ ದಕ್ಷಿಣಾಯನದಿಂದ ದಿಕ್ಕು ಬದಲಿಸಿ ಉತ್ತರಾಯಣದಿಂದ ಹುಟ್ಟುತ್ತಾನೆ. ಇದನ್ನು ಭಾರತೀಯ ಸಂಸ್ಕೃತಿಯಲ್ಲಿ ಶುಭದಿನವೆಂದು ಪರಿಗಣಿಸುತ್ತಿದ್ದು, ಈ ಪ್ರಯುಕ್ತ ಮಕರ ಸಂಕ್ರಮಣ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಶಾಲಾ ಆವರಣ ಇಲಕಲ್ ಸೀರೆ, ಹಸಿರು ಬಳೆ, ಮುಡಿತುಂಬ ಮಲ್ಲಿಗೆ ಹೂ ಧರಿಸಿಕೊಂಡು ಓಡಾಡುತ್ತಿದ್ದ ವಿದ್ಯಾರ್ಥಿನಿಯರು, ಧೋತಿ, ಪಂಚೆ, ಶೆಲ್ಲೆ ಧರಿಸಿದ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು.
ಸಂಸ್ಥೆಯ ಕಾರ್ಯದರ್ಶಿ ಪ್ರವೀಣ ಮಸಳಿ ಉದ್ಘಾಟಿಸಿ ಮಾತನಾಡಿದರು.
ಸಂಕ್ರಾಂತಿ ಹಬ್ಬವು ಗ್ರಾಮೀಣ ಸಂಸ್ಕೃತಿಯ ಸೊಗಡಿನ ಸಂಖೇತವಾಗಿದೆ. ಹಬ್ಬಗಳು, ನಮ್ಮ ಸಂಸ್ಕೃ ತಿ ಮತ್ತು ಜಾನಪದ ಕಲೆಗಳು ಗ್ರಾಮೀಣ ಪ್ರದೇಶದಲ್ಲಿಯೇ ಉಳಿಯುವುದು ಕಷ್ಟವಾಗುತ್ತಿದೆ, ಇನ್ನು ನಗರ ಪ್ರದೇಶಗಳ ಜನರಿಗೆ ಹಳ್ಳಿಯ ಸೊಗಡು ಮತ್ತು ದೇಸಿ ಸಂಸ್ಕೃತಿಯ ಪರಿಚಯವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಜಾನಪದ ಹಾಡುಗಳನ್ನು ಹಾಡಿದರು ಜೊತೆಗೆ ಹಾಡುಗಳಿಗೆ ನೃತ್ಯವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಸಿದರಾಯ ಮಸಳಿ ಕೆಂಚಪ್ಪ ಪೂಜಾರಿ ಹಿರಿಯರಾದ ಸಿದ್ದಯ್ಯ ಸತ್ತಿಗೇರಿ ವಿಠ್ಠಲ ಗಡದಿ ಪ್ರಾಚಾರ್ಯಯರಾದ ಎಂ ಎ ಹಿರೇಮಠ
ಶಿಕ್ಷಕರಾದ ಎಂ ಜಿ ಕುಲಕರ್ಣಿ ಎಂ ಎಸ್ ಹಿರೇಮಠ ಎಸ್ ಎ ವಾಲಿಕಾರ ರಾವಸಾಬ ಶೇಡ್ಯಾಳ ಧರೆಪ್ಪ ಸಿದ್ನಾಥ ನಿವೇದಿತಾ ಹಿರೇಮಠ ನವೀನ ಹಿರೇಮಠ ಕಾಲೇಜು ಉಪನ್ಯಾಸಕರಾದ ಕೃಷ್ಣಾ ಕಾಳೆ ಮಂಜುನಾಥ ಪಾತ್ರೊಟ ರಜನಿ ಗುದಗೇನವರ ಮತ್ತಿತರರು ಇದ್ದರು.

