ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿದ್ಯಾರ್ಥಿಗಳು ತಂದೆ-ತಾಯಿಗಳಿಗೆ, ಶಿಕ್ಷಣ ಕೊಟ್ಟ ಗುರುಗಳಿಗೆ ಗೌರವವನ್ನು ಸಲ್ಲಿಸುವುದರ ಜೊತೆಗೆ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಮಾದರಿಯ ವ್ಯಕ್ತಿಗಳಾಗಿ ರೂಪಗೊಳ್ಳಬೇಕೆಂದು ಹೂವಿನಹಿಪ್ಪರಗಿಯ ಯೋಗೇಶ್ವರ ಮಾತಾ ಕಲಾ ಮತ್ತು ವಾಣಿಜ್ಯ ಪಪೂ ಕಾಲೇಜಿನ ಉಪನ್ಯಾಸಕಿ, ಸಾಹಿತಿ ಶಾಂತಾ ಬಿರಾದಾರ ಹೇಳಿದರು.
ಪಟ್ಟಣದ ಬಸವೇಶ್ವರ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಬುಧವಾರ ಹಮ್ಮಿಕೊಂಡಿದ್ದ ಲಿಂ.ಶಾಂತಾಬಾಯಿ ಕೊಟ್ಲಿ, ಲಿಂ.ಮಲ್ಲಪ್ಪ ಕೊಟ್ಲಿ, ಲಿಂ. ಶಿವಮ್ಮ ಕ್ವಾಟಿ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಶಿವಯೋಗಿ ಸಿದ್ರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾನವೀಯ ಮೌಲ್ಯಗಳ ಕುರಿತು ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ನಾಳಿನ ಭವ್ಯ ಭಾರತದ ಪ್ರಜೆಗಳಾಗಿ ನಿರ್ಮಾಣಗೊಳ್ಳುವದಲ್ಲಿ ಯಾವುದೇ ಸಂದೇಹವಿಲ್ಲ. ಮಕ್ಕಳು ಶಾಲಾ ಹಂತದಲ್ಲಿ ಪ್ರಶ್ನಿಸುವ ಗುಣ ಬೆಳೆಸಿಕೊಂಡು ವಿಷಯಗಳನ್ನು ಗ್ರಹಿಸಬೇಕು. ಮಕ್ಕಳು ದೇಶದ ಭವಿಷ್ಯವಾಗಿದ್ದು. ಅವರಿಗೆ ಸುರಕ್ಷಿತ ಪರಿಸರ, ಗುಣಮಟ್ಟದ ಶಿಕ್ಷಣ, ಆರೋಗ್ಯ ಮತ್ತು ಗೌರವಯುತ ಜೀವನ ಒದಗಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಮಕ್ಕಳು ಬಸವಾದಿ ಶರಣರು ಹಾಕಿಕೊಟ್ಟ ಜೀವನದ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಅಗತ್ಯವಿದೆ. ಮೌಲ್ಯಯುತ ಬದುಕಿಗೆ ಆದ್ಯತೆ ನೀಡಿ ಸದೃಢ ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸುವುದಕ್ಕೆ ನಿರಂತರ ಅಧ್ಯಯನ, ಶಿಸ್ತು, ಸಮಯ ಪಾಲನೆ ರೂಢಿಸಿಕೊಂಡರೆ ಭವಿಷ್ಯ ಉಜ್ವಲಗೊಳ್ಳುತ್ತದೆ. ವಿದ್ಯಾರ್ಥಿಗಳು ಪ್ರಾಮಾಣಿಕತೆಯಿಂದ ಬದುಕುವುದನ್ನು ಕಲಿಯಬೇಕೆಂದು ಕೆಲವು ನಿದರ್ಶನಗಳ ಹೇಳಿದರು.
ಶಿವಯೋಗಿ ಸಿದ್ರಾಮೇಶ್ವರರ ಕುರಿತು ಶಿಕ್ಷಕಿ, ಸಾಹಿತಿ ಅರುಂದತಿ ಹತ್ತಿಕಾಳ ಮಾತನಾಡಿದರು.
ಅಧ್ಯಕ್ಷತೆಯ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ ಮಾತನಾಡಿ, ಪರಿಷತ್ತು ಹಲವಾರು ಶರಣರ ಜಯಂತಿಗಳನ್ನು ಆಚರಿಸುವುದರ ಜೊತೆಯಲ್ಲಿ ಪರಿಷತ್ತಿನ ದತ್ತಿಗಳನ್ನು ಸ್ಮರಣೆ ಮಾಡುವ ಜೊತೆಯಲ್ಲಿ 12ನೇ ಶತಮಾನದ ಬಸವಾದಿ ಶರಣರ ವಿಚಾರಧಾರೆಗಳನ್ನು ವಚನ ಸಾಹಿತ್ಯದ ಮೂಲಕ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಮೂಲಕ ನಿರ್ವಹಿಸಿಕೊಂಡು ಹೋಗುತ್ತಿದೆ. ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಗೆಳೆಯರಂತೆ ಒಳ್ಳೆಯ ಮಾರ್ಗದರ್ಶರಾಗಿ ನೀತಿ ಶಿಕ್ಷಣವನ್ನು ಬೋಧಿಸುವುದರ ಜೊತೆಗೆ ಶರಣರ ವಿಚಾರಧಾರೆಗಳನ್ನು ವಚನಗಳ ಮೂಲಕ ಪ್ರಚುರ ಪಡಿಸಬೇಕೆಂದರು.
ಕಾರ್ಯಕ್ರಮವನ್ನು ಬಸವ ತತ್ವ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷೆ ಕಮಲಾ ತಿಪ್ಪನಗೌಡರ ಉದ್ಘಾಟಿಸಿದರು.
ವೇದಿಕೆಯಲ್ಲಿ ದತ್ತಿ ದಾನಿಗಳಾದ ನಾಗೇಶ ಕ್ವಾಟಿ, ಬಸವರಾಜ ಕೊಟ್ಲಿ, ನಿವೃತ್ತ ಶಿಕ್ಷಕರಾದ ಎಸ್.ಬಿ.ಬಶೆಟ್ಟಿ, ಎಸ್.ಜಿ.ಮೊಕಾಶಿ, ಎಸ್.ಎಸ್.ಝಳಕಿ, ಎಚ್.ಎಸ್.ಬಿರಾದಾರ, ಪಿ.ಎಲ್.ಹಿರೇಮಠ, ಎಸ್.ಕೆ.ಸೋಮನಕಟ್ಟಿ, ಆರ್.ಜಿ.ಅಳ್ಳಗಿ, ಎಸ್.ಪಿ.ಬಶೆಟ್ಟಿ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಶಾಲೆಯ ಮುಖ್ಯಗುರು ಎ.ಆರ್.ಅಥರ್ಗಾ ಇತರರು ಇದ್ದರು. ಕದಳಿ ವೇದಿಕೆಯ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಬಸವರಾಜ ಚಿಂಚೋಳಿ ಸ್ವಾಗತಿಸಿದರು. ಗುರುರಾಜ ಕನ್ನೂರ ನಿರೂಪಿಸಿ, ವಂದಿಸಿದರು.

