ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಭೇಟಿ | ರೈತರ ಮನವೊಲಿಕೆಗೆ ಪ್ರಯತ್ನ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮುಳವಾಡ ಕೆಐಡಿಬಿಗೆ ಭೂಮಿ ಕಳೆದುಕೊಂಡ ಭೂ ಹಿತರಕ್ಷಣಾ ನಿರಾಶ್ರಿತರ ರೈತ ಸಂಘದಿಂದ ತಹಶೀಲ್ದಾರ ಕಚೇರಿ ಎದುರುಗಡೆ ಹಮ್ಮಿಕೊಂಡ 10 ನೇ ದಿನದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಭೇಟಿ ನೀಡಿದರು.
ಅಪರ ಜಿಲ್ಲಾಧಿಕಾರಿಗಳು ಉಪವಾಸ ಸತ್ಯಾಗ್ರಹ ನಿರತ ರೈತರೊಂದಿಗೆ ಚರ್ಚಿಸಿ ಮನವೊಲಿಸಲು ಪ್ರಯತ್ನಿಸಿದರು. ಆದರೆ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಸತ್ಯಾಗ್ರಹವನ್ನು ಹಿಂಪಡೆದುಕೊಳ್ಳಲು ನಿರಾಕರಿಸಿದರು.
ಈ ವೇಳೆ ರೈತರಾದ ಶರಣು ಅಂಗಡಿಯವರು ಕೆಐಡಿಬಿ ಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಐಡಿಬಿಗೆ ಭೂಮಿ ಕಳೆದುಕೊಂಡ ರೈತರಿಗೆ ಯೋಗ್ಯವಾದ ಬೆಲೆ ನೀಡುತ್ತಿಲ್ಲ. ನಮ್ಮ ಭೂಮಿಗೆ ಪರಿಹಾರ ನೀಡದೆ ಜಮೀನಿನ ಪಹಣಿ ಪತ್ರದಲ್ಲಿ ಹೆಸರನ್ನು ಕಡಿಮೆ ಮಾಡಿದ್ದಾರೆ ಇದರಿಂದ ಬಹಳಷ್ಟು ಅನ್ಯಾಯವಾಗಿದೆ. ಜೆಎಂಸಿ ಆಧಾರದ ಮೇಲೆ ಜಮೀನುಗಳಲ್ಲಿದ್ದ ಗಿಡ ಮರಗಳಿಗೆ ಸರಿಯಾದ ಪರಿಹಾರ ನೀಡದೆ ಲಂಚ ಪಡೆದು ಕೆಲವರಿಗೆ ಹೆಚ್ಚು ಹಾಗೂ ಕೆಲವರಿಗೆ ಕಡಿಮೆ ಹಣ ನೀಡಿ ರೈತರಲ್ಲಿ ತಾರತಮ್ಯ ಮಾಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಭೂ ಹಿತರಕ್ಷಣಾ ನಿರಾಶ್ರೀತರ ರೈತ ಸಂಘದ ಅಧ್ಯಕ್ಷ ಶಿವಾನಂದ ಕೆಂಗಲಗುತ್ತಿ ಮಾತನಾಡಿ, 2013 ರ ಆದೇಶದಂತೆ 1ಎಕರೆ ನೀರಾವರಿ ಭೂಮಿಗೆ 20 ಲಕ್ಷ, ಒಣ ಬೇಸಯಕ್ಕೆ 20ಲಕ್ಷ ರೂಪಾಯಿ ಕೊಡಬೇಕೆಂದು ಅವಾರ್ಡ್ ಮಾಡಬೇಕು. ಹಂತ ಹಂತವಾಗಿ ನೀಡಿದ ಪರಿಹಾರದ ಹಣಕ್ಕೆ ಶೇ 18 % ಬಡ್ಡಿ ಹಣ ಸೇರಿಸಿಕೊಡಬೇಕು. ಭೂ ನಿರಾಶ್ರಿತರಿಗೆ ಯೋಜನಾ ಸರ್ಟಿಫಿಕೇಟ್ ಕೊಡಬೇಕು. ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಮಾತನಾಡಿ, ಕೆಐಡಿಬಿಗೆ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಕೊಡಿಸುವದು ಸರ್ಕಾರದ ಕೆಲಸ. ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಪರಿಹಾರ ಒದಗಿಸಬೇಕು. ನಾವು ಯಾರು ಕೂಡಾ ಅಧಿಕಾರಿಗಳ ಬಳಿ ಹೋಗುವುದಿಲ್ಲ. ಸಂಕ್ರಾಂತಿ ಭೋಗಿ ಹಬ್ಬವಿದ್ದರೂ ಕೂಡಾ ಇಂತಹ ಉರಿ ಬಿಸಿಲಿನಲ್ಲಿ ಕುಳಿತು ರೈತರು ಹೋರಾಟ ಮಾಡುತಿದ್ದರು ಕೂಡ ಸರ್ಕಾರ ವಾಗಲಿ, ಸಂಬಂಧಿಸಿದ ಸಚಿವರಾಗಲಿ ಮತ್ತು ಇಲಾಖೆ ಅಧಿಕಾರಿಗಳಾಗಲಿ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಇವರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಎರಡು ದಿನಗಳಲ್ಲಿ ಅಧಿಕಾರಿಗಳು ಬಂದು ರೈತರ ಸಮಸ್ಯೆ ಬಗೆಹರಿಸಲಿಲ್ಲ ಅಂದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ತಹಶೀಲ್ದಾರ ಎಸ್.ಎಚ್. ಅರಕೇರಿ, ಕೃಷ್ಣ ಗುಡೂರ, ಪಿಎಸ್ಐ ಅಶೋಕ ನಾಯಕ, ಮುಳವಾಡ ಭೂ ಹಿತರಕ್ಷಣಾ ನಿರಾಶ್ರಿತರ ರೈತರ ಸಂಘದ ಉಪಾಧ್ಯಕ್ಷ ಬಸವರಾಜ ಬೀಳಗಿ, ಕಾರ್ಯದರ್ಶಿ ಅರ್ಜುನ ಹರಿಜನ, ಶಂಭು ಪವಾರ, ಜಗದೀಶ ಕೆಂಗಲಗುತ್ತಿ, ಈರಬಸು ಕಲಗುರ್ಕಿ, ರವಿ ಪತ್ತಾರ, ಯಂಕಪ್ಪ ಚವ್ಹಾಣ, ಹಣಮಂತ ಹಂಚಿನಾಳ ಸೇರಿದಂತೆ ಕಲಗುರ್ಕಿ, ಮುಳವಾಡ ರೈತರು ಉಪಸ್ಥಿತರಿದ್ದರು.

