ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯಲ್ಲಿ, ಹಸಿ ಕಸ ಮರದಿಂದ ಉದುರಿದ ಎಲೆ, ಮಧ್ಯಾಹ್ನ ಬಿಸಿ ಊಟ ತಯಾರಿಕಾ ಕೋಣೆಯಲ್ಲಿ ಉತ್ಪತ್ತಿಯಾಗುವಂತಹ ಹಸಿ ಕಸವನ್ನು ಮತ್ತು ಉಳಿದಿರುವಂತಹ ನಿರುಪಯುಕ್ತ ಆಹಾರವನ್ನು ಹಾಗೂ ಶಾಲೆಯ ಆವರಣದಲ್ಲಿ ಬಿದ್ದಿರುವ ಮರದ ಎಲೆಗಳನ್ನು ಮತ್ತು ಇತ್ಯಾದಿ ಹಸಿ ಕಸವನ್ನು ಉಪಯೋಗಿಸಿಕೊಂಡು ಪೈಪ್ ಕಾಂಪೋಸ್ಟಿಂಗ್ ಮುಖಾಂತರ ಸಾವಯುವ ರಸಗೊಬ್ಬರವನ್ನು ತಯಾರಿಸುವ ವಿಧಾನಕ್ಕೆ ಬಬಲೇಶ್ವರ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗ ಪ್ರೀತಿ ಗಡೆದ ರವರು ಚಾಲನೆಯನ್ನು ನೀಡಿ ಮಾತನಾಡಿದರು.
ಶಾಲೆಯ ಮಕ್ಕಳಿಗೆ ಮೂಲದಲ್ಲಿಯೇ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಕುರಿತು ಜಾಗೃತಿಯನ್ನು ಮೂಡಿಸಿದರು. ಪ್ರಕೃತಿ ನಮಗೆ ಹಲವಾರು ಕೊಡುಗೆಗಳನ್ನು ನೀಡಿದೆ. ನಾವು ಪ್ರಕೃತಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕಿದ್ದರೆ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ನಾವು ಎಲ್ಲೆಂದರಲ್ಲಿ ಕಸವನ್ನು ಬಿಸಾಡದೇ ಪಟ್ಟಣ ಪಂಚಾಯಿತಿಯ ವಾಹನಗಳಿಗೆ ಕಸವನ್ನು ಮೂಲದಲ್ಲಿಯೇ ವಿಂಗಡಿಸಿ ಕೊಡಬೇಕು ಎಂದು ಹೇಳಿದರು. ಕಸದಿಂದ ರಸ ಎನ್ನುವ ಮಾತಿನಂತೆ ನಾವು ಕಸವನ್ನು ಎಲ್ಲೆಂದರಲ್ಲಿ ಬಿಸಾಕದೆ ಕಸವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸಿಕೊಂಡರೆ ನಮಗೆ ಆದಾಯ ನೀಡುತ್ತದೆ ಎಂದರು. ಪಟ್ಟಣ ಸುಂದರವಾಗಿ ಕಾಣಲು ಸಹಾಯವಾಗುತ್ತದೆ. ಪಟ್ಟಣ ಪಂಚಾಯಿತಿಯ ಕಿರಿಯ ಆರೋಗ್ಯ ನಿರೀಕ್ಷಕ ಬಸವರಾಜ ಕಾಜಿಬೀಳಗಿ ಅವರು ಪೈಪ್ ಕಾಂಪೋಸ್ಟಿಂಗ್ ಮುಖಾಂತರ ಸಾವಯುವ ಗೊಬ್ಬರವನ್ನು ತಯಾರಿಸುವ ವಿಧಾನದ ಕುರಿತು ಪ್ರಾಯೋಗಿಕವಾಗಿ ಮಕ್ಕಳಿಗೆ ತಿಳಿಹೇಳಿ ದಿನನಿತ್ಯ ಶಾಲೆಯ ಬಿಸಿ ಊಟ ಆಹಾರ ಕೋಣೆಯಲ್ಲಿ ಉತ್ಪತ್ತಿಯಾಗುವಂತಹ ಹಸಿ ಕಸವನ್ನು ತಪ್ಪದೇ ಆ ಪೈಪಿನಲ್ಲಿಯೇ ಹಾಕಲು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಅಶೋಕ ಬೂದಿಹಾಳ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್.ಎ. ಗಂಗನಗೌಡ, ಹರೀಶ್ ಬಬಲೇಶ್ವರ, ಎಂ. ಎನ್. ಪಟೇಗಾರ, ಉಮಾ ಜಾದವ, ಗಂಗಾ ಕೊಲಕಾರ, ಡಿ.ಆರ್. ಬಿರಾದಾರ, ಸೌಭಾಗ್ಯ ಮಿರ್ಜಿ, ಅಕ್ಷತಾ ಮುತ್ತೂರ ಹಾಗೂ ಶಾಲೆಯ ಎಲ್ಲಾ ಸಹ ಶಿಕ್ಷಕರು, ಮುದ್ದು ಮಕ್ಕಳು ಮತ್ತು ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳು ಹಾಜರಿದ್ದರು.

