ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವಂತೆ ಲೋಕಾಯುಕ್ತ ಉಪ ಅಧೀಕ್ಷಕ ಶೈಲೇಂದ್ರ ಕುಮಾರ್ ಕಿವಿಮಾತು
ಉದಯರಶ್ಮಿ ದಿನಪತ್ರಿಕೆ
ಹೆಚ್.ಡಿ.ಕೋಟೆ: ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಗೌರವ, ಸಹನೆಯಿಂದ ಮಾತನಾಡಬೇಕು. ಪ್ರತಿಯೊಬ್ಬ ಅಧಿಕಾರಿ, ನೌಕರರು ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಲೋಕಾಯುಕ್ತ ಮೈಸೂರು ವಿಭಾಗದ ಉಪ ಅಧೀಕ್ಷಕ ಶೈಲೇಂದ್ರ ಕುಮಾರ್ ಕಿವಿಮಾತು ಹೇಳಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ಮೈಸೂರು ವತಿಯಿಂದ ಸಾರ್ವಜನಿಕರಿಂದ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ತವ್ಯದ ವೇಳೆ ಪ್ರತಿಯೊಬ್ಬ ನೌಕರರು , ಅಧಿಕಾರಿಗಳು ತಪ್ಪದೇ ಇಲಾಖೆ ನೀಡಿರುವ ಗುರುತಿನ ಚೀಟಿ ಹಾಕಿಕೊಳ್ಳಬೇಕು. ಕಚೇರಿಯಲ್ಲಿ ಮೂಮೆಂಟ್ ರಿಜಿಸ್ಟರ್, ಕ್ಯಾಸ್ ರಿಜಿಸ್ಟರ್ ನಿರ್ವಹಣೆ ಮಾಡಿ ಕೇಂದ್ರ ಸ್ಥಾನದಲ್ಲಿದ್ದು, ಸಾರ್ವಜನಿಕರ ಕೆಲಸ ಮಾಡಬೇಕಾಗಿದೆ. ಕರ್ತವ್ಯ ಲೋಪ ಆಗದಂತೆ ತಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದು ಹೇಳಿದರು.
ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಅಧಿಕಾರಿಗಳ ವಿರುದ್ದವೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಕೇವಲ ದೂರು ಸ್ವೀಕರಿಸುವ ಸಭೆ ಮಾಡಬೇಡಿ, ಕಳೆದ ಸಲ ನಿಮಗೆ ಸಾರ್ವಜನಿಕರು ನೀಡಿರುವ ದೂರಿನ ಬಗ್ಗೆ ನೀವು ತೆಗೆದುಕೊಂಡಿರುವ ಕ್ರಮದ ಬಗ್ಗೆ ಅನುಪಾಲನ ವರದಿಯನ್ನು ತಿಳಿಸುವಂತೆ ಬಿಗಿಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಡಿವೈಎಸ್ಪಿ, ನೀವು ನೀಡಿರುವ ದೂರನ್ನ ಪರಿಶೀಲನೆ ಮಾಡಿ, ನಮ್ಮ ಹಂತದಲ್ಲಿ ಬಗೆಹರಿಸುವ ಸಮಸ್ಯೆಗಳನ್ನು ಇಲ್ಲೇ ಬಗೆಹರಿಸುತ್ತೇವೆ. ಕೆಲ ದೂರುಗಳನ್ನು ನಮೂನೆ-1 ಮತ್ತು 2 ರಲ್ಲಿ ನೇರವಾಗಿ ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಅವರಿಗೆ ಸಲ್ಲಿಸುತ್ತೇವೆ. ಈ ಪ್ರಕ್ರಿಯೆಗೆ ಸ್ವಲ್ಪ ವಿಳಂಭವಾಗಲಿದ್ದು, ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಲೋಕಾಯುಕ್ತ ಉಪ ಅಧೀಕ್ಷಕ ವೆಂಕಟೇಶ್, ಪೊಲೀಸ್ ಇನ್ಸ್ ಪೆಕ್ಟರ್ ಶಶಿಕುಮಾರ್, ತಹಸೀಲ್ದಾರ್ ಶ್ರೀನಿವಾಸ್, ಇಒ ಧರಣೇಶ್, ಆರಕ್ಷಕ ವೃತ್ತ ನಿರೀಕ್ಷಕ ಗಂಗಾಧರ್ ಮತ್ತು ತಾಲೂಕು ಮಟ್ಟದ ಅಧಿಕಾರಿ ವರ್ಗದವರು, ರೈತ ಸಂಘಟನೆಗಳ ಪದಾಧಿಕಾರಿಗಳಾದ ಎಂ.ಬಿ.ಕುಮಾರಸ್ವಾಮಿ, ನಾಗರಾಜು, ವಿವಿಧ ಗ್ರಾಮಗಳ ಮುಖಂಡರಾದ ಲಾರಿಪ್ರಕಾಶ್, ಎಚ್.ಮಟಕೆರೆ ಕೃಷ್ಣ, ನಾಗರಾಜ್, ಚೆನ್ನ ಕೋಟೆ, ಸಣ್ಣಕುಮಾರ್, ಅನುಷಾ, ಸೈಯಾದ್, ಚೌಡಳ್ಳಿ ಜವರಯ್ಯ, ಕುಮಾರ್ ಸ್ವಾಮಿ, ಹೈರಿಗೆ ಶಿವರಾಜ್, ಮುದ್ದುಮಲ್ಲಯ್ಯ ಸೇರಿದಂತೆ ಅನೇಕರಿದ್ದರು.
ದೂರುಗಳ ಸುರಿಮಳೆ
ಜಮೀನು, ಜಮೀನುಗಳ ರಸ್ತೆ(ದಾರಿ)ಒತ್ತುವರಿ, ಕೆರೆ ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿಲ್ಲ. ಹಾಸ್ಟೆಲ್ ಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಸರಿಯಾಗಿ ಬಿತ್ತನೆ ಬೀಜದ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಕಂದಾಯ ಇಲಾಖೆಯಲ್ಲಿ ಕೆಲಸಗಳು ತ್ವರಿತಗತಿಯಲ್ಲಿ ಆಗುತ್ತಿಲ್ಲ. ಕಡತ ವಿಲೇವಾರಿ ವಿಳಂಬ ಮತ್ತು ದಾಖಲೆಗಳ ನಾಶ ಮಾಡಲಾಗುತ್ತಿದೆ. ಕಬಿನಿ ಹಿನ್ನೀರಿನಲ್ಲಿ ತಲೆಯೆತ್ತಿರುವ ಅಕ್ರಮ ರೆಸಾರ್ಟ್ ಗಳ ತೆರವು ಮಾಡುತ್ತಿಲ್ಲ. ಮೈಸೂರು-ಮಾನಂದವಾಡಿ ರಸ್ತೆ ಒತ್ತುವರಿ ಆಗುತ್ತಿದ್ದರೂ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಮೀನುಗಳ ಸರ್ವೇ ಕಾರ್ಯ ವಿಳಂಭವಾಗುತ್ತಿದೆ. ಹೀಗೆ ಸಾರ್ವಜನಿಕರು ದೂರುಗಳ ಸುರಿಮಳೆಗೈದರು.
ಅಧಿಕಾರಿ ಮಹೇಶ್ ವಿರುದ್ಧ ದೂರುಗಳ ಸುರಿಮಳೆ
ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್ ವಿರುದ್ಧ ಬೈರೇಗೌಡ ಎಂಬುವವರು ಸಾಲು ಸಾಲು ಆರೋಪ ಮಾಡಿದರು. ಆದಿವಾಸಿಗಳಿಗೆ ಪೌತಿ ಖಾತೆ ಮಾಡಿಕೊಡುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಹಾಡಿಗಳಲ್ಲಿ ಆಗುವ ಸಮಸ್ಯೆ ಬಗ್ಗೆ ಗಮನಕ್ಕೆ ತಂದರೆ ಉದಾಸೀನತೆ ತೋರುತ್ತಿದ್ದಾರೆ. ಕರೆ ಮಾಡಿದರೆ ತಕ್ಷಣ ಸ್ವೀಕಾರ ಮಾಡಲ್ಲ, ಹಾಡಿ ಜನರ ಸಮಸ್ಯೆಗಳಿಗೆ ಮಹೇಶ್ ಅವರು ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿದರು.

