ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟ ಹಿನ್ನೆಲೆ ಜೈಲುವಾಸ ಅನುಭವಿಸಿದ್ದ ಆರು ಜನ ಹೋರಾಟಗಾರರು | ಇದು ಜನರ ಗೆಲುವೆಂದ ಹೊಸಮನಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟ ಹಿನ್ನೆಲೆಯಲ್ಲಿ ಜೈಲು ವಾಸ ಅನುಭವಿಸಿದ್ದ ಆರು ಜನ ಹೋರಾಟಗಾರರು ಬುಧವಾರ ಸಂಜೆ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡರು.
ಅತ್ತ ಜೈಲಿನಿಂದ ಹೋರಾಟಗಾರರಾದ ಸಂಗನಬಸವೇಶ್ವರ ಸ್ವಾಮೀಜಿ, ಭಿ. ಭಗವಾನರೆಡ್ಡಿ, ಸಿದ್ರಾಮ ಹಳ್ಳೂರ, ಅರವಿಂದ ಕುಲಕರ್ಣಿ, ಭೋಗೇಶ ಸೊಲ್ಲಾಪೂರ, ಅನೀಲ ಹೊಸಮನಿ ಅವರು ಕಾರಾಗೃಹದಿಂದ ಹೊರ ಬರುತ್ತಿದ್ದಂತೆ ಹೋರಾಟಗಾರರು, ಕುಟುಂಬ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಿಹಿ ತಿನಿಸಿ, ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು.
ಮೆಡಿಕಲ್ ಕಾಲೇಜ್ ಹೋರಾಟಗಾರರಿಗೆ ಜಯವಾಗಲಿ ಎಂಬ ಉದ್ಘೋಷಗಳು ಮೊಳಗಿದವು.
ಈ ವೇಳೆ ಜೈಲಿನಿಂದ ಬಿಡುಗಡೆಗೊಂಡ ಹೋರಾಟಗಾರ ಹಾಗೂ ಪರ್ತಕರ್ತ ಅನೀಲ ಹೊಸಮನಿ ಮಾತನಾಡಿ, ಇದು ಜನರ ಗೆಲುವು, ಈ ಹೋರಾಟದ ಫಲವಾಗಿ ವಿಜಯಪುರ ಅಷ್ಟೇ ಅಲ್ಲದೇ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪಿಸುವ ನಿರ್ಧಾರ ಕೈಬಿಟ್ಟಿದೆ, ಕೊನೆಗೂ ಸರ್ಕಾರ ಮೆಡಿಕಲ್ ಕಾಲೇಜ್ ಸ್ಥಾಪಿಸುವ ನಿರ್ಧಾರ ಪ್ರಕಟಿಸಿರುವುದು ಸಂತೋಷ ತರಿಸಿದೆ, ಜೈಲಿನಲ್ಲಿ ಸಚಿವ ಶಿವಾನಂದ ಪಾಟೀಲರು ಭೇಟಿಯಾಗಿ ಬರುವ ಬಜೆಟ್ ನಲ್ಲಿ ಮೆಡಿಕಲ್ ಕಾಲೇಜ್ ಘೋಷಣೆ ಮಾಡುವ ಭರವಸೆ ನೀಡಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲರು ಸಹ ಈ ವಿಷಯವಾಗಿ ಸ್ಪಂದಿಸಿ ಮೆಡಿಕಲ್ ಕಾಲೇಜ್ ಸ್ಥಾಪನೆಯ ನಿಟ್ಟಿನಲ್ಲಿ ಪ್ರಬಲವಾಗಿ ಶ್ರಮಿಸುವುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ಇದು ಜನರ ಗೆಲುವು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಮುಖಂಡರಾದ ಶ್ರೀನಾಥ್ ಪೂಜಾರಿ, ಮಲ್ಲಿಕಾರ್ಜುನ ಯಂಡಿಗೇರಿ, ಎಂ.ಸಿ. ಮುಲ್ಲಾ, ಅಕ್ರಂ ಮಾಶ್ಯಾಳಕರ, ಎಚ್.ಟಿ. ಭರತಕುಮಾರ, ಎಚ್.ಟಿ. ಮಲ್ಲಿಕಾರ್ಜುನ, ಸುರೇಶ ಬಿಜಾಪೂರ, ಸುರೇಖಾ ರಜಪೂತ ಮೊದಲಾದವರು ಸ್ವಾಗತಿಸಿ, ಸನ್ಮಾನಿಸಿದರು.
ತೆರೆದ ವಾಹನದಲ್ಲಿ ಹೋರಾಟಗಾರರ ಮೆರವಣಿಗೆ
ಜೈಲಿನಿಂದ ಹೋರಾಟಗಾರರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು.
ದಾರಿಯುದ್ದಕ್ಕೂ ಹೋರಾಟಗಾರರಿಗ ಜಯವಾಗಲಿ ಎಂಬ ಘೋಷಣೆ ಮೊಳಗಿತು. ಪ್ರಮುಖ ದಾರಿಯಲ್ಲಿ ಸಾಗಿದ ಮೆರವಣಿಗೆ ಹೋರಾಟ ಸ್ಥಳವಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ತಲುಪಿತು.

