ವಿಜಯಪುರದಲ್ಲಿ ಅಕ್ಕಪಡೆ ಯೋಜನೆ ಸಂಚಾರಿ ವಾಹನಕ್ಕೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಘನತೆ ಹಾಗೂ ಸಬಲೀಕರಣದ ಉದ್ದೇಶದಿಂದ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಅಕ್ಕಪಡೆ ಯೋಜನೆಯ ಸಂಚಾರಿ ವಾಹನಕ್ಕೆ ಡಿ.೨೨ ರಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲ ಅವರು ಚಾಲನೆ ನೀಡಿದ್ದರು.
ಈ ಸಂದರ್ಭದಲ್ಲಿ ಶಾಸಕರಾದ ವಿಠ್ಠಲ ಕಟಕಧೋಂಡ ಹಾಗೂ ಅಶೋಕ ಮನಗೂಳಿ, ಸಂಸದರಾದ ರಮೇಶ ಜಿಗಜಿಣಗಿ, ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಈ ಸಂದರ್ಭದಲ್ಲಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ಅವರು ಜ.೧೪ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಡೆದ ಅಕ್ಕಪಡೆ ಯೋಜನೆಯ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿ, ಅಕ್ಕಪಡೆ ಯೋಜನೆಯು ರಾಜ್ಯಾದ್ಯಂತ ಅನುಷ್ಠಾನಗೊಂಡಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಅಕ್ಕಪಡೆ ಸಿಬ್ಬಂದಿಗಳು ಎರಡು ಪಾಳಿಯಲ್ಲಿ (ಶಿಪ್ಟ್) ಕಾರ್ಯನಿರ್ವಹಿಸುತ್ತಿದ್ದು, ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳ ಮೇಲಿನ ಶೋಷಣೆ ಹಾಗೂ ದೌರ್ಜನ್ಯದ ಸಂದರ್ಭದಲ್ಲಿ ತಕ್ಷಣ ರಕ್ಷಣೆ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಮುಖ್ಯಮಂತ್ರಿಗಳು ಈ ವಿನೂತನ ಯೋಜನೆಗೆ ಈಗಾಗಲೇ ರಾಜ್ಯದಾದ್ಯಂತ ಚಾಲನೆ ನೀಡಿರುತ್ತಾರೆ ಎಂದು ಹೇಳಿದರು.
ವಿಜಯಪುರ ನಗರದಲ್ಲಿ ಸಂತೆ, ದೇವಸ್ಥಾನ, ಜಾತ್ರೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ನೀಡುವಂತೆ ಅಕ್ಕಪಡೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಯಿತು.
ಅಕ್ಕಪಡೆಗೆ ಪ್ರತ್ಯೇಕ ವಾಹನದ ಸೌಲಭ್ಯವಿದ್ದು, ಅದರಲ್ಲಿ ಪೊಲೀಸ್ ಇಲಾಖೆಯ ಓರ್ವ ವಾಹನ ಚಾಲಕರು ಹಾಗೂ ಓರ್ವ್ಬ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ನಿಯೋಜಿತರಾಗಿರುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ದೀಪಾಕ್ಷಿ ಜಾನಕಿ, ಪೊಲೀಸ್ ಇನ್ಸ್ಪೆಕ್ಟರ್ ವಿಠ್ಠಲ ಕೊಕಟನೂರ, ಜಿಲ್ಲಾ ಮಿಷನ್ ಸಂಯೋಜಕರಾದ ಭಾರತಿ ಹೊನ್ನಳ್ಳಿ ಹಾಗೂ ಅಕ್ಕಪಡೆ ಸಿಬ್ಬಂದಿ ಉಪಸ್ಥಿತರಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಅಧಿಕಾರಿ ದೀಪಾ ಕಾಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

