ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲ್ಲೂಕಿನ ೩೮ ಗ್ರಾಮ ಪಂಚಾಯತಿ ಮತ್ತು ಇತರೇ ಗ್ರಾಮಗಳಿಗೆ ಜನ ಜೀವನ್ ಮಶಿನ್ ಯೋಜನೆಯ ಅಡಿಯಲ್ಲಿ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಆದರೆ ಕಳೆದ ಒಂದು ವಾರದಿಂದ ನೀರು ಪೂರೈಕೆಯಾಗದೇ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳಿಗೆ ಕಾರಣ ಕೇಳಿದರೆ ಜನ ಜೀವನ್ ಮಶಿನ್ ಅಡಿಯಲ್ಲಿ ನೀರು ಸರಬರಾಜು ಮಾಡುವ ಟೆಂಡರುದಾರರಿಗೆ ಬರಬೇಕಾದ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಅವರು ನೀರು ಬಿಡುವದನ್ನು ಸ್ಥಗಿತಗೊಳಿಸಿದ್ದಾರೆ. ನೀರು ಪೂರೈಕೆ ಮಾಡುವ ಕೆರೆಗಳಲ್ಲಿ, ಬೋರವೆಲ್ ಗಳಲ್ಲಿ ಮತ್ತು ಇತರೇ ನೀರಿನ ಮೂಲಗಳಲ್ಲಿ ಸಾಕಷ್ಟು ನೀರು ಇದ್ದರೂ ಕೂಡಾ ಟೆಂಡರುದಾರರು ಕಳೆದ ಆರು ತಿಂಗಳಿಂದ ಬಿಲ್ಲು ಪಾವತಿಯಾಗದಿರುವದರಿಂದ ನೀರು ಸರಬರಾಜು ಮಾಡುವದನ್ನು ನಿಲ್ಲಿಸಿದ್ದಾರೆ.
ಈ ಕುರಿತು ನೀರು ಸರಬರಾಜು ಮಾಡುವ ಗುತ್ತಿಗೆದಾರರನ್ನು ಕೇಳಿದರೆ ತಾಲ್ಲೂಕು ಪಂಚಾಯತಿ ಮತ್ತು ಜಿ.ಪಂಚಾಯತಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದಾರೆ. ಅದಲ್ಲದೇ ಜಿಲ್ಲೆಯ ಎಲ್ಲಾ ಗುತ್ತಿಗೆದಾರರು ರಾಜ್ಯ ಮಟ್ಟದಲ್ಲಿ ಈ ಬಗ್ಗೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಆದರೂ ಕೂಡಾ ಹಣ ಬಿಡುಗಡೆಯ ಸೂಚನೆಗಳು ಕಂಡು ಬಂದಿಲ್ಲ. ಹೀಗಾಗಿ ಗ್ರಾಮಗಳ ಜನತೆ ಇನ್ನೂ ಎಷ್ಟು ದಿವಸ ನೀರಿಲ್ಲದೇ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಲು ಬಾರದಂತಾಗಿದೆ. ಗ್ರಾಮೀಣ ಪ್ರದೇಶದ ಜನತೆಯ ಸ್ಥಿತಿ “ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ” ಎನ್ನುವಂತಾಗಿದೆ.
ಈ ಬಗ್ಗೆ ತಹಶೀಲ್ದಾರ ಬಿ.ಎಸ್.ಕಡಕಬಾವಿ ಅವರನ್ನು ಕೇಳಿದರೆ ಇದರ ಬಗ್ಗೆ ನನಗೆ ಯಾವದೇ ಮಾಹಿತಿಯಿಲ್ಲ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವಿಚಾರಿಸುತ್ತೇನೆ ಎಂದು ಉತ್ತರಿಸುತ್ತಾರೆ.
ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್.ಕನ್ನೂರ ಅವರು ದೂರವಾಣಿ ಸಂಪರ್ಕ ಸ್ವೀಕರಿಸುತ್ತಿಲ್ಲ.

