ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ | ಜ.18 ರಿಂದ ಜ.22 ರವರೆಗೆ ಜಾನುವಾರ ಜಾತ್ರೆ | ಒಮ್ಮತದ ನಿರ್ಣಯದಿಂದ ಆತಂಕ ದೂರ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಎಪಿಎಮ್‌ಸಿ, ಪಟ್ಟಣ ಪಂಚಾಯತ್ ಹಾಗೂ ಶ್ರೀ ಸಂಗಮೇಶ್ವರ ಸಂಸ್ಥೆಯ ದೇವರ ಜಾತ್ರಾ ಸಮಿತಿಯವರ ನಡೆದ ಸಭೆ ಪಟ್ಟಣದ ಆರಾಧ್ಯ ದೈವ ಶ್ರೀ ಸಂಗಮೇಶ್ವರ ದೇವರ ಜಾತ್ರಾ ಮಹೋತ್ಸವದ ಆಯೋಜನೆ ಕುರಿತು ಕಳೆದ ಕೆಲವು ದಿನಗಳಿಂದ ವಿವಿಧ ವಲಯಗಳಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿ ಗೊಂದಲ ಉಂಟಾಗಿತ್ತು. ಇದರಿಂದ ಭಕ್ತರು ಹಾಗೂ ಸಾರ್ವಜನಿಕರಲ್ಲಿ ಆತಂಕವೂ ಕಾಣಿಸಿಕೊಂಡಿತ್ತು.
ಈ ಹಿನ್ನೆಲೆ ಶ್ರೀ ಸಂಗಮೇಶ್ವರ ಸಂಸ್ಥೆಯ ದೇವರ ಜಾತ್ರಾ ಸಮಿತಿಯ ಆಡಳಿತ ಮಂಡಳಿ, ಪಟ್ಟಣ ಪಂಚಾಯತ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ), ಹಾಗೂ ಗ್ರಾಮದ ಗಣ್ಯರೊಂದಿಗೆ ಸಭೆ ನಡೆಯಿತು. ಸಭೆಗಳಲ್ಲಿ ಎಲ್ಲರ ಅಭಿಪ್ರಾಯಗಳನ್ನು ಆಲಿಸಿ, ಸಂಪ್ರದಾಯ, ಸಾರ್ವಜನಿಕ ಹಿತ ಮತ್ತು ವ್ಯವಸ್ಥೆಯ ಸುಗಮತೆಗೆ ಆದ್ಯತೆ ನೀಡುವ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಚರ್ಚೆಗಳ ಫಲವಾಗಿ, ಜಾತ್ರಾ ಮಹೋತ್ಸವವನ್ನು ಸಂಪ್ರದಾಯಬದ್ಧವಾಗಿ, ಶಾಂತಿ–ಸೌಹಾರ್ದದೊಂದಿಗೆ ಹಾಗೂ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ನಡೆಸಲು ಒಮ್ಮತದ ಸಹಮತ ಅಭಿಪ್ರಾಯಕ್ಕೆ ಬರಲಾಯಿತು. ನಿಗದಿತ ವೇಳಾಪಟ್ಟಿಯಂತೆ ಅವರಾತ್ರಿ ಅಮವಾಸ್ಯೆಯದಿನದಿಂದ ಜ.18 ರಿಂದ ಜ.22 ರವರೆಗೆ ಜಾತ್ರೆಯ ಎಲ್ಲಾ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರ ಸುರಕ್ಷತೆ, ಸ್ವಚ್ಛತೆ, ಸಂಚಾರ ವ್ಯವಸ್ಥೆ ಹಾಗೂ ಜಾನುವಾರು ಮೇಳದ ವ್ಯವಸ್ಥೆಗಾಗಿ ನೀರಿನ ಹಾಗೂ ವಿದ್ಯುತ್ ಬೆಳಕಿನ ವ್ಯವಸ್ಥೆ, ರೈತರ ಹಾಗೂ ಜಾನುವಾರು ಚಿಕಿತ್ಸಾಲಯ ಸೇರಿದಂತೆ ವಿಶೇಷ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಜಾತ್ರಾ ಚಡಚಣ ಉಪ ಮಾರುಕಟ್ಟೆ ಹಾಗೂ ಇಂಡಿ ಎಪಿಎಮ್‌ಸಿ ಕಾರ್ಯದರ್ಶಿ ಐ.ಎಸ್.ಔರಂಗಾಬಾದ ಮಾತನಾಡಿ, ನಾವೆಲ್ಲರು ಒಗ್ಗಟ್ಟಿನ ನಿರ್ಣಯಕ್ಕೆ ಬಂದಿದ್ದೇವೆ ಎಂದರು.
ಚಡಚಣ ಪ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ ಮಾತನಾಡಿ “ಭಿನ್ನಾಭಿಪ್ರಾಯಗಳು ಸಹಜವಾದರೂ, ಅಂತಿಮವಾಗಿ ದೇವರ ಜಾತ್ರೆ ಹಾಗೂ ಮೂಕ ಪ್ರಾಣಿಗಳ ಜಾನುವಾರ ಜಾತ್ರೆ ಇದು ಎಲ್ಲರ ಹಬ್ಬ ಎಂಬ ಮನೋಭಾವದಿಂದ ಒಗ್ಗಟ್ಟಿನ ನಿರ್ಣಯಕ್ಕೆ ಬಂದಿದ್ದೇವೆ. ಎಲ್ಲರೂ ಸಹಕಾರ ನೀಡಿದರೆ ಜಾತ್ರೆ ಯಶಸ್ವಿಯಾಗಿ ನೆರವೇರುತ್ತದೆ” ಎಂದು ಹೇಳಿದರು.
ಪಟ್ಟಣದ ಗಣ್ಯರು ಹಾಗೂ ಭಕ್ತರು, ಗೊಂದಲಕ್ಕೆ ತೆರೆ ಎಳೆದ ಒಮ್ಮತದ ನಿರ್ಣಯವನ್ನು ಸ್ವಾಗತಿಸಿ, ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವವನ್ನು ಶಾಂತಿ, ಶಿಸ್ತು ಮತ್ತು ಭಕ್ತಿಭಾವದಿಂದ ಆಚರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಚಡಚಣ ತಹಶೀಲದಾರ ಸಂಜಯ ಇಂಗಳೆ, ಪ.ಪಂ.ಸಿಓ. ಬಿ.ಕೆ.ತಾವಸೆ, ಪ.ಪಂ. ಉಪಾಧ್ಯಕ್ಷ ಇಲಾಹಿ ನದಾಫ, ಎಂ.ಆರ್.ಪಾಟೀಲ.ಬಾಬುಗೌಡ ಪಾಟೀಲ, ಗಂಗಾಧರ ಪಾವಲೆ, ಪ.ಪಂ.ಸದಸ್ಯರಾದ ರಾಜು ಕೋಳಿ, ಪ್ರಕಾಶಗೌಡ ಪಾಟೀಲ, ಚೇತನ ನಿರಾಳೆ, ಶ್ರೀಕಾಂತ ಗಂಟಗಲಿ, ಇಬ್ರಾಹಿಂ ಸೌದಾಗರ, ವಾಸಿಮ್ ಮುಲ್ಲಾ, ಸಂಗಪ್ಪ ಭಂಡರಕವಠೆ, ಸೇರಿದಂತೆ ಪ.ಪಂ.ಎಲ್ಲ ಸದಸ್ಯರು ಹಾಗೂ ಶ್ರೀ ಸಂಗಮೇಶ್ವರ ಸಂಸ್ಥೆಯ ದೇವರ ಜಾತ್ರಾ ಸಮಿತಿಯ ಸದಸ್ಯರು, ಗಣ್ಯರು ಇದ್ದರು.

