ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಜ್ಞಾವಂತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ನಿಸ್ವಾರ್ಥತೆ, ಸಮರ್ಪಣೆ ಮತ್ತು ಸಂತೃಪ್ತಿ ಭಾವ ಅತಿ ಮುಖ್ಯ. ಎಲ್ಲ ಸೇವೆಗಳಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಕಲೆ, ಪ್ರತಿಭೆಯನ್ನು ಗುರುತಿಸಿ, ಉತ್ತಮ ಶಿಕ್ಷಣ ನೀಡುತ್ತಾ, ಭಾವೀ ಭವ್ಯ ಭಾರತದ ಜವಾಬ್ದಾರಿಯುತ ನಾಗರೀಕರನ್ನಾಗಿ ರೂಪಿಸುವುದು ಅತಿ ಅಗತ್ಯವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಎ.ಟಿ.ಹಿರೇಮಠ ಅವರು ಅಭಿಪ್ರಾಯಪಟ್ಟರು.
ನಗರದ ಅಥಣಿ ರಸ್ತೆಯ ಅಲ್-ಅಮೀನ ಆಸ್ಪತ್ರೆಯ ಎದುರಿಗೆ ಇರುವ ಸೇನಾ ನಗರದ ಆದಿಶಕ್ತಿ ದೇವಸ್ಥಾನದಲ್ಲಿ ಜರುಗಿದ ಶ್ರೀಮತಿ ಶಾರದಾ ಬಿರಾದಾರ ಪಾಟೀಲ ಶಿಕ್ಷಕಿಯರ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪಠ್ಯ ವಿಷಯ ಜ್ಞಾನ ನೀಡಿದರೆ ಸಾಲದು. ಅವರು ಸಮಾಜದಲ್ಲಿ ಗೌರವಯುತವಾದ ಬದುಕು ನಡೆಸಲು ಉತ್ತಮ ಸಂಸ್ಕೃತಿ-ಸಂಸ್ಕಾರ, ನೈತಿಕ -ಮಾನವೀಯ ಮೌಲ್ಯಗಳು, ರಾಷ್ಟçಪ್ರೇಮ ಮತ್ತು ರಾಷ್ಟ್ರೀಯ ಐಕ್ಯತೆಯ ಗುಣಗಳನ್ನು ಒಡಮೂಡಿಸಬೇಕಾಗಿದೆ. ಈ ಶಿಕ್ಷಕಿಯರು ತಮ್ಮ ಇಡೀ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಜ್ಞಾನಧಾರೆ ಎರೆಯಲು ಶ್ರಮಿಸಿದ ಸಮಾಜಕ್ಕೆ ಮಾದರಿ ಶಿಕ್ಷಕಿಯಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಸ ಶೆಡಶ್ಯಾಳ ಮಾತನಾಡಿ, ನಿವೃತ್ತ ಹೊಂದಿದ ಈ ಪಾಟೀಲ ಮೇಡಂ ಅವರು ಸದಾ ಶಿಕ್ಷಕ-ವಿದ್ಯಾರ್ಥಿಗಳೊಂದಿಗೆ ಅವಿನಾವ ಸಂಬಂಧದೊಂದಿಗೆ ಅಪಾರ ಪ್ರೀತಿಗೆ ಪಾತ್ರರಾಗಿದ್ದರು ಎಂದರು.
ಇದೇ ಸಂದರ್ಭದಲ್ಲಿ ಅನಿಸಿಕೆ ವ್ಯಕ್ತಪಡಿಸಿದ ಪ್ರೊ. ಎಂ.ಎಸ್.ಖೊದ್ನಾಪೂರ ಅವರು, ನಮ್ಮ ಇಂದಿನ ಶೈಕ್ಷಣಿಕ ಸಾಧನೆಗೆ ಇಂತಹ ಸೇವೆಯೇ ಜೀವನದ ಉಸಿರು ನಂಬಿದ ಅದೇಷ್ಟೋ ಶಿಕ್ಷಕರ ಪ್ರಭಾವ, ಪ್ರೇರಣೆ ಮತ್ತು ಮಾರ್ಗದರ್ಶನ ನಮಗೆಲ್ಲ ದಾರಿದೀಪವಾಗಿದೆ. ಬಿರಾದಾರ ಮೇಡಂ ಆವರು ೧೯೮೭ ರಲ್ಲಿ ನಮಗೆ ಪ್ರಾಥಮಿಕ ಶಾಲೆಯಲ್ಲಿ ಹಾಕಿಕೊಟ್ಟ ಭದ್ರ ಬುನಾದಿ ಮತ್ತು ಉತ್ತಮ ಮೌಲ್ವಿಕ ವಿಚಾರಧಾರೆಗಳು ಇಂದಿಗೂ ಅವಿಸ್ಮರಣೀಯ ಎಂದರು.
ಕಾರ್ಯಕ್ರಮದಲ್ಲಿ ತೊರವಿ ಹಿರೇಮಠದ ಮಲ್ಲಿಕಾರ್ಜುನ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಈ ಸಮಾರಂಭದಲ್ಲಿ ನಿವೃತ್ತ ಶಿಕ್ಷಣ ಅಧಿಕಾರಿ ಶ್ರೀಮತಿ. ಆರ್.ಎಸ್.ಕೋಟ್ನಾಳ, ಶಿಕ್ಷಕಿ ಸುಖದೇವಿ ಅಲಬಾಳಮಠ, ಆದಿಶಕ್ತಿ ದೇವಸ್ಥಾನದ ಅಧ್ಯಕ್ಷ ಶ್ರೀ ಶರಣು ಸಬರದ ಇನ್ನಿತರರು ವೇದಿಕೆಯ ಮೇಲಿದ್ದರು.
ಈ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಶ್ರೀ ಎಂ.ಎಸ್.ಭೂಸಗೊಂಡ, ಸುಧಾ ಹಂಚಿನಾಳಕರ, ಶಂಕರ ಹಾರಿವಾಳ, ಮಲ್ಲಪ್ಪ ಕುಂಬಾರ, ಎಸ್.ಎಸ್.ಮಾಳಿ, ವಿಜಯಪುರ ಗ್ರಾಮೀಣ ವಲಯದ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದ, ಶಿಕ್ಷಕ ಸಂಘದ ಪದಾಧಿಕಾರಿಗಳು, ಕನಮಡಿಯ ಬಿರಾದಾರ ಪಾಟೀಲ ಕುಟುಂಬ ವರ್ಗ ಮತ್ತು ಸೇನಾ ನಗರದ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

