ವಿಜಯಪುರದ ಎಕ್ಸಲಂಟ್ ಕಾಲೇಜಿನಲ್ಲಿ ರಾಷ್ಟ್ರೀಯ ಯುವದಿನ | ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜ್ಞಾನವನ್ನು ಹೊರತುಪಡಿಸಿ ಎಲ್ಲವನ್ನು ತೊರೆದವನು ಸನ್ಯಾಸಿಯಾಗುತ್ತಾನೆ. ಆದರೆ ಎಲ್ಲ ಸನ್ಯಾಸಿಗಳು ಸಹ ವೀರ ಸನ್ಯಾಸಿಗಳು ಆಗುವುದಕ್ಕೆ ಸಾಧ್ಯವಿಲ್ಲ. ಇಂದ್ರಿಯಗಳ ಮೇಲೆ ಗೆಲುವು ಸಾಧಿಸಿ, ಭಾರತದ ಜ್ಞಾನ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದರು ವೀರ ಸನ್ಯಾಸಿ ವಿವೇಕಾನಂದ ಎಂದು ಕರೆಸಿಕೊಂಡರು. ಅಂದಿನಿಂದ ಇಂದಿನ ವರೆಗೂ ಯುವಕರ ಪಾಲಿನ ಚೈತನ್ಯವಾಗಿ ಗುರುತಿಸಿಕೊಂಡರು ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ ಹೇಳಿದರು.
ವೀರ ಸನ್ಯಾಸಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ನಗರದ ಎಕ್ಸಲಂಟ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಧಾರವಾಡದ ಎಕ್ಸಲಂಟ್ ನೀಟ್ ಅಕಾಡೆಮಿಯ ಪ್ರಾಂಶುಪಾಲ ಡಾ.ಜಗದೀಶ ಚಿತ್ತರಗಿ; ಯುವಕರಲ್ಲಿ ಜಾಗೃತಿ ಮೂಡಿಸಿದ ಸ್ವಾಮಿ ವಿವೇಕಾನಂದರು ಇಂದು ದೇಹದಿಂದ ದೂರಾಗಿದ್ದರು ಸಹ ಅವರ ವಿಚಾರ ಹಾಗೂ ಆಲೋಚನೆಗಳಿಂದಾಗಿ ನಮ್ಮ ನಡುವೆಯೇ ಇದ್ದಾರೆ ಎಂದು ಹೇಳಿದರು.
ಪ್ರಾಂಶುಪಾಲ ಮಂಜುನಾಥ ಜುನಗೊಂಡ ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ಸ್ವಾಗತಿಸಿದರು, ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ನಿರೂಪಿಸಿದರು, ಭೌತಶಾಸ್ತ್ರ ಉಪನ್ಯಾಸಕ ರವಿ ಕಲ್ಲೂರ ಮಠ ವಂದಿಸಿದರು.

