ಲೇಖನ
– ಮಲ್ಲಪ್ಪ ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಬಸವಾದಿ ಶರಣರು ಸಮಾಜದಲ್ಲಿ ಸಮಾನತೆ, ಸಮಷ್ಠಿ ಭಾವ ಮತ್ತು ಭಾವೈಕ್ಯತೆಯನ್ನು ಮೂಡಿಸುತ್ತಾ, ಸಾಮಾಜಿಕ ಸುಧಾರಣೆ ಮಾಡುವಲ್ಲಿ ಶ್ರಮಿಸಿದವರು. ವಚನಕಾರರು ತಮ್ಮ ವಚನ ಸಿದ್ದಾಂತದ ಮೂಲಕ ಸಮಾಜದಲ್ಲಿನ ಲಿಂಗ, ಜಾತಿ, ಮತ, ಪಂಥ, ಪಂಗಡಗಳ ಭೇದಗಳನ್ನು ತೊಲಗಿಸುವಲ್ಲಿ ಹೋರಾಡಿದರು. ಸಾಮಾಜಿಕ ಅರಿವು, ಧರ್ಮತತ್ವ ಮತ್ತು ವೈಯಕ್ತಿಕ ಬದುಕಿನ ಆಳವಾದ ಚಿಂತನೆಗಳನ್ನು ಪ್ರತಿಪಾದಿಸುತ್ತಾ, ಸಮುದಾಯದ ಒಳಿತಿಗಾಗಿ ಕೆರೆ ಕಟ್ಟೆ ನಿರ್ಮಾಣದಂತಹ ಕರ್ಮಯೋಗವನ್ನು ಮರೆದ ಶ್ರೇಷ್ಠ ಶರಣರೆಂದರೆ ಶಿವಯೋಗಿ ಸಿದ್ದರಾಮೇಶ್ವರರು.
ಮಹಾರಾಷ್ಟçದ ಸೋಲಾಪೂರ ಜಿಲ್ಲೆಯ ಸೊನ್ನಲಿಗೆ ಎಂಬ ಗ್ರಾಮದಲ್ಲಿ ಮುದ್ದುಗೌಡ-ಸುಗ್ಗಲೆ ದಂಪತಿಗೆ ಧೂಳಿ ಮಾಕಾಳ ರೇವಣಸಿದ್ದ ದೇವರ ವರದಿಂದ ಜನಿಸಿದ ಶಿವಯೋಗಿ ಸಿದ್ದರಾಮೇಶ್ವರ ಅವರು ಬಾಲ್ಯದಲ್ಲಿಯೇ ಒಬ್ಬ ಮುಗ್ಧ ಭಕ್ತನಾಗಿದ್ದರು. ಶಿವಭಕ್ತನಾಗಿದ್ದ ಇವರು ಶಿವಯೋಗ ಮಾರ್ಗದಿಂದ ಪರಮಶಿವನ ದರ್ಶನ ಪಡೆಯಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಸೊನ್ನಲಿಗೆಯಿಂದ ಶ್ರೀಶೈಲದತ್ತ ನಡೆದುಕೊಂಡ ತೆರಳಿ ಕೊನೆಗೆ ಮಲ್ಲಿಕಾರ್ಜುನ ದರ್ಶನ ಪಡೆದವರು.

ಕೊಡುಗೆಗಳು
ಬಡವರ ಕಷ್ಟ-ಕಾರ್ಪಣೆಗಳ ನಿವಾರಣೆ, ಸಾಮೂಹಿಕ ವಿವಾಹಗಳ ಜಾರಿಯಂತಹ ಪ್ರಗತಿಪರವಾದ ವಿಚಾರಧಾರೆಗಳನ್ನು ಹೊಂದಿದ್ದ ಶಿವಯೋಗಿ ಸಿದ್ದರಾಮೇಶ್ವರ ಅವರು ಸಮಾಜದ ಎಲ್ಲ ವರ್ಗಗಳ ಜನತೆಗೆ ಆದರ್ಶಪ್ರಾಯರಾಗಿದ್ದಾರೆ. ಬರಗಾಲದಂತಹ ಸಂದರ್ಭಗಳಲ್ಲಿ ಸಮಾಜದಕ್ಕಾಗಿ ಕೆರೆ, ಭಾವಿ ಮತ್ತು ಅರವಟ್ಟಿಗೆಗಳನ್ನು ನಿರ್ಮಿಸಿ ಜನಕಲ್ಯಾಣದ ಕಾರ್ಯಗಳನ್ನು ಕೈಗೊಂಡರು, ಅದಕ್ಕಂತಲೇ ಅವರಿಗೆ ಕರ್ಮಯೋಗಿ ಎಂತಲೂ ಕರೆಯುತ್ತಾರೆ.
ಶಿವಯೋಗಿ ಸಿದ್ದರಾಮೇಶ್ವರ ಅವರು, “ವೇಷವ ಧರಿಸಿ ಫಲವೇನಯ್ಯಾ, ವೇಷದಂತಾಚರಣೆ ಇಲ್ಲದನ್ನಕ್ಕ? ವೇದಾಂತವನೋದಿ ಫಲವೇನಯ್ಯಾ, ಬ್ರಹ್ಮ ತಾವಾಗದನ್ನಕ್ಕ? ನಾನಾ ಕೆರೆಯ ತೋಡಿ ಫಲವೇನಯ್ಯಾ, ಪುಣ್ಯತೀರ್ಥಗಳು ಬರದನ್ನಕ್ಕ? ಕಪಿಲಸಿದ್ದ ಮಲ್ಲಿಕಾರ್ಜುನ” ಎಂನ ವಚನದಲ್ಲಿ ನಮ್ಮ ಬದುಕಿನಲ್ಲಿ ಉತ್ತಮ ಆಚರಣೆಗಳಿಲ್ಲದೇ ಕೇವಲ ಮೇಲ್ನೋಟಕ್ಕೆ ಭಕ್ತನ ತರಹ, ಅಥವಾ ಬಹಿರಂಗವಾಗಿ ಸಾಧು-ಸನ್ಯಾಸಿ, ಗುರವಿನ ತರಹ ಕಾಣಿಸಿಕೊಂಡರೆ ಅದು ಕೇವಲ ವೇಷ-ಭೂಷಣವಾಗುತ್ತದೆ. ವೇದಾಂತ-ಉಪನಿಷತ್ತು ಮತ್ತು ಮಹಕಾವ್ಯಗಳ ತಿರುಳು ಅಥವಾ ಮರ್ಮವನ್ನು ಅರಿಯದೇ ವೇದಗಳನ್ನು ಓದಿದರೇನು ಪ್ರಯೋಜನ. ನಡೆಯಿಲ್ಲದ ಆಚರಣೆ, ಕೇವಲ ನಟನೆ ಮತ್ತು ಮುಖವಾಡಕ್ಕಾಗಿ ಇದ್ದಂತೆ” ಎಂದು ಸಾರ್ಥಕ ಬದುಕಿನ ಸಂದೇಶಗಳ ಬಗ್ಗೆ ವಚನಗಳಲ್ಲಿ ಉಲ್ಲೇಖವಿದೆ. ಸ್ವರ ವಚನ, ವಚನಗಳು, ಬಸವಸ್ತೋತ್ರ, ಅಷ್ಟಾವರಣ ಸ್ತೋತ್ರ, ಸಂಕೀರ್ಣ ತ್ರಿವಿಧಗಳನ್ನು ರಚಿಸಿದ್ದಾರೆ. ಸಿದ್ದರಾಮೇಶ್ವರ ವಚನಗಳಲ್ಲಿ ಶಿವಯೋಗದ ಅನುಷ್ಠಾನ, ಲಿಂಗೈಕ್ಯತೆ ಮತ್ತು ಸಮಾಜ ಸೇವೆಗೆ ಮಹತ್ವ ನೀಡಿದ ‘ಸಮಾಜೋದ್ಧಾರಕ ವಚನಕಾರ’ಎಂದು ಕರೆಯಬಹುದು. ಕಪಿಲಸಿದ್ದ ಮಲ್ಲಿಕಾರ್ಜುನ ಎಂಬ ಅಂಕಿತನಾಮದಿಂದ ಹೆಸರುವಾಸಿಯಾದ ಶಿವಯೋಗಿ ಸಿದ್ದರಾಮೇಶ್ವರ ಅವರ ೧೯೬೫ ವಚನಗಳು ದೊರತಿದ್ದು, ಆ ಎಲ್ಲ ವಚನಗಳಲ್ಲಿ ಸಾಮಾಜಿಕ ಕಳಕಳಿ, ಧರ್ಮ ತತ್ವಗಳ ಚರ್ಚೆ ಪ್ರಧಾನ ವಿಷಯವಾಗಿದೆ.
ಕೊನೆಯ ನುಡಿ
ಶಿವಯೋಗಿ ಸಿದ್ದರಾಮ ವಚನ “ನಡೆನುಡಿಗಳೊಂದಾದವರಿಗೊಲಿವೆ ಕಂಡಯ್ಯಾ, ನುಡಿಯೆ ಬ್ರಹ್ಮವಾದವರ ನೀನೊಲ್ಲೆಯಯ್ಯಾ ಮೃಡನೆ, ಕಪಿಲಸಿದ್ದ ಮಲ್ಲಿಕಾರ್ಜುನಲಿಂಗ ನುಡಿಯ ಬ್ರಹ್ಮಂಗಳಿಂದಪ್ಪುದೇನೋ” ಎಂದು ನಾವು ಆಡುವ ಮಾತು ಮತ್ತು ಮಾಡುವ ಕೆಲಸ-ಕಾರ್ಯಗಳಲ್ಲಿ ಸಮನ್ವಯತೆ ಇರಬೇಕು. ಒಂದು ವೇಳೆ ನಡೆ-ನುಡಿ ಒಂದಾಗದಿದ್ದರೆ ಅದು ಆ ಶಿವನಿಗೆ ಮೆಚ್ಚುಗೆಯಾಗಲಾರದೆಂಬ ಡಾಂಭಿಕ ಭಕ್ತಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಂದೇಶ ತಿಳಿಸುವಂತಿದೆ. ವಚನಗಳು ೧೨ ನೇಯ ಶತಮಾನದ ವಚನ ಸಾಹಿತ್ಯದ ಅತ್ಯಂತ ಪ್ರಮುಖ ಭಾಗವಾಗಿದ್ದು, ಅವುಗಳಲ್ಲಿ ಅಧ್ಯಾತ್ಮ, ಶಿವಭಕ್ತಿ, ಜ್ಞಾನ, ವೈರಾಗ್ಯ, ಶಿವಯೋಗದ ಮಾರ್ಗ, ಸಾಮಾಜಿಕ ಕಳಕಳಿ ಮತ್ತು ಸಮ ಸಮಾಜ ನಿರ್ಮಾಣ ಮತ್ತು ಪಂಚ ಸದಾಚಾರಗಳಾದ ಸನ್ನಡತೆ, ಸದಾಚಾರ, ಸದ್ಭಾವ, ಸತ್ಸಂಗ, ಸಮಾನತೆ ಮತ್ತು ಸಮಷ್ಠಿಭಾವ ಮತ್ತು ಸಾಮರಸ್ಯತೆಯ ವಿಷಯಗಳೇ ಪ್ರಧಾನವಾಗಿವೆ. ಬಸವಣ್ಣ ಮತ್ತು ಚನ್ನಬಸವಣ್ಣನವರ ಮಹತ್ವವನ್ನು ಸಾರುತ್ತಾ, ಗುರುಗಳಿಲ್ಲದ ಜೀವನ ವ್ಯರ್ಥ ಎಂದು ಬೋಧಿಸಿದ್ದಾರೆ. ಇವರು ನಮ್ಮ ವಚನ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದು, ಇವರ ವಚನಗಳಲ್ಲಿ ಸಾರ-ಸಂದೇಶ, ಭಕ್ತಿ ಮಾರ್ಗ, ಮಹಿಳಾ ಸಮಾನತೆ ಮತ್ತು ಕಾಯಕದ ಮಹತ್ವದ ಬಗ್ಗೆ ವೈಚಾರಿಕ ಮತ್ತು ತಾತ್ವಿಕ ನೆಲೆಗಟ್ಟಿನಲ್ಲಿ ಉಲ್ಲೇಖಿತವಾಗಿವೆ. ನಾವೆಲ್ಲರೂ ಈ ಕರ್ಮಯೋಗಿಯ ಸಾಮಾಜಿಕ ಕಳಕಳಿ, ತತ್ವ-ಸಿದ್ದಾಂತ, ವಿಚಾರಧಾರೆ ಮತ್ತು ಜೀವನ-ಮೌಲ್ವಿಕ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಅವರ ಜಯಂತಿ ಆಚರಣೆಯು ನಿಜಕ್ಕೂ ಅರ್ಥಪೂರ್ಣವಾಗಲಿದೆ ಎನ್ನುವುದು ನನ್ನ ಅಂಬೋಣ.


