ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ವಿಜಯಪುರದ ಲೋಕಾಯುಕ್ತ ಅಧಿಕಾರಿಗಳು ಧಿಡೀರ ಭೇಟಿ ನೀಡಿ, ವಿವಿಧ ಕಡತ ಹಾಗೂ ಎಲ್ಲ ವಿಭಾಗಗಳನ್ನು ಪರಶೀಲಿಸಿದರು.
ಆಸ್ಪತ್ರೆಯ ಎಕ್ಸರೇ, ಹೆರಿಗೆ ಕೋಣೆ, ಶಸ್ತ್ರ ಚಿಕಿತ್ಸೆ ಘಟಕ, ದಂತ ಹಾಗೂ ನೇತ್ರ ತಪಾಸಣೆ, ಲ್ಯಾಬರೋಟರಿ, ಡಯಾಲಿಸಿಸ್ ಕೋಣೆ ಹಾಗೂ ಇನ್ನಿತರ ವಿಭಾಗಗಳ ಎಲ್ಲ ಕೋಣೆಗಳ ಮೂಲೆ ಮೂಲೆಯನ್ನು ಜಾಲಾಡಿದರು.
ಇತ್ತೀಚಿಗೆ ಅಂದರೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷರು ಹಾಗೂ ಹಸಿರು ಸೇನೆ ಅಧ್ಯಕ್ಷರು ವತಿಯಿಂದ ರೈತರು ಪ್ರತಿಭಟನೆ ನಡೆಸಿ, ಪಟ್ಟಣದಲ್ಲಿ ಇರುವ ತಾಲೂಕಾ ಸಮುದಾಯ ಕೇಂದ್ರದಲ್ಲಿ ವೈದ್ಯರು ರೈತರಿಗೆ ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ.ಚಿಕಿತ್ಸೆ ನೀಡಿದರೂ ಔಷಧಿಗಳನ್ನು ಹೊರಗಿನಿಂದ ತರಬೇಕು ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಾರೆ ಎಂದು ಆರೋಪಿಸಿ, ತಹಶೀಲದಾರ ಅವರಿಗೆ ಮನವಿ ಕೊಟ್ಟಿದ್ದರು ಅದನ್ನು ಲೋಕಾಯುಕ್ತರ ಗಮನಕ್ಕೆ ಸಾರ್ವಜನಿಕರು ತಂದಾಗ ಡಾ.ಎ.ಎನ್.ಅಗರಖೇಡ ಅವರು ಮಧ್ಯ ಪ್ರವೇಶಿಸಿ ಅದೆಲ್ಲ ಸುಳ್ಳು ಆರೋಪ ಸತ್ಯವಾಗಿದ್ದರೆ ಪ್ರೀಕ್ರಿಷ್ಯನ್ (ಪುರಾವೆ)ತೆಗೆದುಕೊಡು ಬರಲಿ ಎಂದು ಹೇಳಿದರು.
ಲೋಕಾಯುಕ್ತ ಭೇಟಿ ವೇಳೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲವು ಔಷಧಿಗಳು ಡೇಟ ಡಿಬಾರ ಆಗಿರುವುದು ಅವರ ಗಮನಕ್ಕೆ ಬಂದಿದ್ದು, ಇಂತಹ ಔಷಧಿಗಳನ್ನು ರೋಗಿಗಳಿಗೆ ನೀಡಿದರೆ ಹೇಗೆ ಎಂದು ಆಸ್ಪತ್ರೆಯ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಆಸ್ಪತ್ರೆಯಲ್ಲಿ ಟ್ಯೂಬಲೈಟ್ಗಳು ಜೋತು ಬಿದ್ದಿದ್ದು ಹಾಗೂ ಗೋಡೆ, ಮೇಲ್ಛಾವಣಿ ಬಿರುಕು ಬಿಟ್ಟಿರುವದನ್ನು ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು ಇವುಗಳನ್ನು ಬೇಗನೆ ಸರಿಪಡಿಸಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು ಎಚ್ಚರಿಸಿದ ಅವರು, ಆಸ್ಪತ್ರೆಯ ಕಟ್ಟಡದ ಮುಂಭಾಗದಲ್ಲಿ ಎಲೆ, ಗುಟಕಾ ತಿಂದು ಉಗಿಳಿದ್ದರಿಂದ ಆಸ್ಪತ್ರೆಯ ಆವರಣ ಶುಚಿಯಾಗಿರದೇ ಗಲೀಜಾಗಿರುವದನ್ನು ನೋಡಿ ಇನ್ನು ಮುಂದೆ ಆಸ್ಪತ್ರೆಯ ಆವರಣ ಹಾಗೂ ಅಲ್ಲಲ್ಲಿ ಕಲ್ಲುಗಳು ಬಿದ್ದಿರುವದನ್ನು ತೆರವುಗೋಳಿಸಿ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದರು.
ಭೇಟಿ ವೇಳೆ ಲೋಕಾಯುಕ್ತ ಅಧಿಕಾರಿ ಆನಂದ ಸೇರಿದಂತೆ ಸಿಬ್ಬಂದಿಗಳು ಇದ್ದರು.
ಮಾಧ್ಯಮದವರಿಗೆ ಮಾಹಿತಿ ನೀಡದ ಲೋಕಾ ಅಧಿಕಾರಿಗಳು
ಮಾಧ್ಯಮದವರು ಲೋಕಾಯುಕ್ತ ಅಧಿಕಾರಿಗಳಿಗೆ ಭೇಟಿ ಉದ್ದೇಶ ಹಾಗೂ ಪರಿಶೀಲಿಸಿದ ದಾಖಲೆಗಳ ಕುರಿತು ವಿಚಾರಿಸಿದಾಗ ಅಧಿಕಾರಿಗಳು ಯಾವುದೇ ಸರಿಯಾದ ಮಾಹಿತಿ ನೀಡದೇ ಕೇವಲ ಮೇಲಾಧಿಕಾರಿಗಳ ಆದೇಶದ ಮೇಲೆ ಭೇಟಿ ನೀಡಿದ್ದೇವೆ ಎಂದು ಹೇಳಿದರು.

