ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರ ಕನಸಿನ ಯೋಜನೆಯಾದ ಸಂತೆ ಮಾರುಕಟ್ಟೆ ಅಭಿವೃದ್ಧಿಯ ಕಾಮಗಾರಿಗೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅವರ ಮತಕ್ಷೇತ್ರವಾದ ಬಸವನ ಬಾಗೇವಾಡಿಯ ಕೊಲ್ಹಾರ ಪಟ್ಟಣಕ್ಕೆ ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ದಿಗಂಬರೇಶ್ವರ ಮಠದ ಬಳಿಯಿರುವ ಸಂತೆ ಮಾರುಕಟ್ಟೆ ಆವರಣದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ಭೂಮಿ ಪೂಜೆ ನೆರವೇರಿಸಿದರು.
ನಬಾರ್ಡ್ ಯೋಜನೆ ಅಡಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವಿಜಯಪುರ ವ್ಯಾಪ್ತಿಯಲ್ಲಿ ಬರುವ ಕೊಲ್ಹಾರ ಪಟ್ಟಣದಲ್ಲಿ 4 ಎಕರೆ 23 ಗುಂಟೆ ಜಾಗದಲ್ಲಿ ಅಂದಾಜು 7 ಕೋಟಿ ರೂಪಾಯಿ ವೆಚ್ಚದ ಸಂತೆ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಸಂತೆ ಮಾರುಕಟ್ಟೆಯು ಕಂಪೌಂಡ್ ಗೋಡೆ, ಪ್ಲಾಟ್ ಫಾರ್ಮ್, ಡಾಂಬರ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಹೈಮಾಸ್ಕ್ ಲೈಟ್, ಜಾನುವಾರು ಕಟ್ಟಲು ಕಲ್ಲಿನ ವ್ಯವಸ್ಥೆ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಒಳಗೊಂಡಿದೆ.
ಮಹಾಂತಯ್ಯ ಹಿರೇಮಠ ಪೂಜೆ ನೆರವೇರಿಸಿದರು.
ಈ ವೇಳೆ ಎ ಪಿ ಎಂ ಸಿ ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ, ಎ ಪಿ ಎಂ ಸಿ ಎ ಇ ಇ ಎಲ್ ಬಿ ಲಮಾಣಿ, ಪ ಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ, ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀಶೈಲ ಮುಳವಾಡ, ತೌಶಿಪ್ ಗಿರಗಾಂವಿ, ದಸ್ತಗೀರ ಕಲಾದಗಿ, ಎಂ.ಆರ್. ಕಲಾದಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

