ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಾನೂನು ಪದವಿ ಪಡೆದುಕೊಳ್ಳಬೇಕಾದರೆ ಮೊದಲೆಲ್ಲ ಬೇರೆಡೆಗೆ ಹೋಗಿ ಕಲಿಯುವ ವ್ಯವಸ್ಥೆ ಇತ್ತು. ಆದರೆ ಇಂದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಟಿಎಸ್‌ಪಿ ಮಂಡಳಿ ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ ಕಾನೂನು ಮಹಾವಿದ್ಯಾಲಯ ಪ್ರಾರಂಭಿಸಿದ್ದು ಸಂತಸ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ನಾಗೇಶ ಮೊಗೇರ ಹೇಳಿದರು.
ಸಿಂದಗಿ ಪಟ್ಟಣದ ಎಚ್.ಜಿ.ಕಾಲೇಜಿನ ಸಭಾಂಗಣದಲ್ಲಿ ಟಿಎಸ್‌ಪಿ ಮಂಡಳಿ ಕಾನೂನು ಮಹಾವಿದ್ಯಾಲಯ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಪೊಲೀಸ್ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಕಾನೂನು ಅರಿವು ನೆರವು, ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹ ಹಾಗೂ ವಿದ್ಯಾರ್ಥಿ ಒಕ್ಕೂಟ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಕ್ಷೇತದಲ್ಲಿಯೂ ವಕೀಲರ ಪಾತ್ರ ಬಹಳ ಮುಖ್ಯವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಒಳ್ಳೆಯ ರಿತೀಯಿಂದ ಅಧ್ಯಯನ ಮಾಡಿ ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಈ ವೇಳೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎ.ಆರ್.ಎ ಮುಲ್ಲಾ, ಸಿವಿಲ್ ನ್ಯಾಯಾಧೀಶೆ ಪಂಕಜಾ ಕೊಣ್ಣೂರ ಮಾತನಾಡಿ, ಕಾನೂನು ಮಹಾವಿದ್ಯಾಲಯವನ್ನು ತಾಲೂಕು ಮಟ್ಟದಲ್ಲಿ ಈ ಸಂಸ್ಥೆ ಪ್ರಾರಂಭಿಸಿದ್ದು ಶ್ಲಾಘನೀಯ. ಕಾನೂನು ಎಂದರೆ ಓದಿ ಪಡೆದುಕೊಳ್ಳುವುದೇ ಕಾನೂನು ಪದವಿ. ಅದೊಂದು ಸಾಮಾನ್ಯ ಜ್ಞಾನ. ಇಂದಿನ ಆಧುನಿಕ ಜಗತ್ತಿನಲ್ಲಿ ಕಾನೂನು ಪದವಿ ಬಹಳ ಮುಖ್ಯವಾಗಿದೆ. ಇದರ ಸದುಪಯೋಗವನ್ನು ಎಲ್ಲ ಕಾನೂನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ಮನಗೂಳಿ ಮನೆತನದಲ್ಲಿ ವಕೀಲರಾಗಬೇಕು ಮತ್ತು ಸಿಂದಗಿ ತಾಲೂಕಿನಲ್ಲಿ ಕಾನೂನು ಪದವಿ ಮಹಾವಿದ್ಯಾಲಯ ಸ್ಥಾಪನೆ ಮಾಡಬೇಕೆಂಬ ಕನಸು ದಿ.ಎಂ.ಸಿ.ಮನಗೂಳಿ ಅವರದ್ದಾಗಿತ್ತು. ಅದು ಇಂದು ನನಸಾಗಿದೆ. ಗ್ರಾಮೀಣ ಭಾಗದ ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದರು.
ಇದೇ ಸಂದರ್ಭದಲ್ಲಿ ಅಪರ ಸರಕಾರಿ ವಕೀಲರು, ಸಂಸ್ಥೆಯ ನಿರ್ದೇಶಕ ಬಿ.ಜಿ.ನೆಲ್ಲಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ ಮಾತನಾಡಿದರು.
ಅಪರಾಧ ವಿಭಾಗದ ಪಿಎಸ್‌ಐ ಎಸ್.ಎಸ್.ತಳವಾರ ೨೦೨೬ರ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹ ಕುರಿತು ಉಪನ್ಯಾಸ ನೀಡಿದರು.
ರಾಗರಂಜಿನಿ ಸಂಗೀತ ತರಬೇತಿ ಕೇಂದ್ರದ ಸಂಚಾಲಕ ಡಾ.ಪ್ರಕಾಶ ಮೂಡಲಗಿ ಪ್ರಾರ್ಥಿಸಿದರು. ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿದರು. ಪ್ರಾಚಾರ್ಯ ನಾನಾಗೌಡ ಸಾವಳಗಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ, ಪ್ರಾಚಾರ್ಯ ನಾನಾಗೌಡ ಸಾವಳಗಿ, ಎ.ಆರ್.ಹೆಗ್ಗನದೊಡ್ಡಿ, ಎಸ್.ಎ.ಪಾಟೀಲ, ಸತೀಶ ಬಸರಕೋಡ, ಎಫ್.ಎ.ಹಾಲಪ್ಪ, ಎಸ್.ಎ.ಜಹಾಗಿರದಾರ ಸೇರಿದಂತೆ ಮಹಾವಿದ್ಯಾಲಯದ ಭೋದಕ ಭೋದಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

