ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಿಕ್ಷಕರ ಬಹುದಿನಗಳ ಬೇಡಿಕೆಯಾಗಿರುವ ಶಿಕ್ಷಕರ ಭವನ ಭೂಮಿ ಪೂಜಾ ಸಮಾರಂಭ, ಸಿಂದಗಿ ಮತಕ್ಷೇತ್ರಕ್ಕೆ ನೂತನವಾಗಿ ಮಂಜೂರಾದ ೮ ಪ್ರೌಢಶಾಲೆಗಳ ಉದ್ಘಾಟನಾ ಸಮಾರಂಭ ಜೊತೆಗೆ ದಿ.ಎಂ.ಸಿ.ಮನಗೂಳಿ ಪ್ರತಿಷ್ಠಾನದ ವತಿಯಿಂದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಪ್ರಥಮ ಹಂತದಲ್ಲಿ ೫೨ ಶುದ್ಧ ಕುಡಿಯುವ ನೀರಿನ ಘಟಕ ವಿತರಣಾ ಸಮಾರಂಭವು ಜ.೦೭ರಂದು ಬುಧವಾರ ಬೆಳಿಗ್ಗೆ ೧೧ಗಂಟೆಗೆ ಸಿಂದಗಿ ಬಸವ ನಗರದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಶಾಸಕ, ಪ್ರತಿಷ್ಠಾನದ ಅಧ್ಯಕ್ಷ ಅಶೋಕ ಮನಗೂಳಿ ಹೇಳಿದ್ದಾರೆ.
ಸಿಂದಗಿ ಪಟ್ಟಣದ ಶಾಸಕರ ಕಛೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಿ.ಎಂ.ಸಿ.ಮನಗೂಳಿ ಅವರ ಪ್ರತಿಷ್ಠಾನದ ವತಿಯಿಂದ ಸಿಂದಗಿ ಮತಕ್ಷೇತ್ರದ ೩೧೪ ಸರಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ವಿತರಿಸುವ ಮಹದಾಸೆಯನ್ನು ಹೊಂದಿದ್ದು, ಸದ್ಯ ಪ್ರಥಮ ಹಂತದಲ್ಲಿ ಸರಕಾರಿ ಶಾಲೆಗಳಿಗೆ ೫೨ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ವಿತರಣೆ ಮಾಡಲಾಗುವುದು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಲಮೇಲ ಶ್ರೀಮಠದ ಚಂದ್ರಶೇಖರ ಶಿವಾಚಾರ್ಯರು, ಊರನ ಹಿರಿಯಮಠದ ಶಿವಾನಂದ ಶಿವಾಚಾರ್ಯರು, ಅರಕೇರಿ ಮೂಲಪೀಠ ಮುಮ್ಮಟಗುಡ್ಡದ ಅವಧೂತಸಿದ್ಧ ಮಹಾರಾಜರು ವಹಿಸಿಕೊಳ್ಳಲಿದ್ದಾರೆ. ಉದ್ಘಾಟನೆಯನ್ನು ಸಚಿವ ಮಧು ಬಂಗಾರೆಪ್ಪ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ, ಮುಖ್ಯ ಅತಿಥಿಗಳಾಗಿ ದಿ.ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ ಅಧ್ಯಕ್ಷ ಶರಣಪ್ಪ ಎಸ್. ವಾರದ, ವಿಜಯಪುರ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವ್ಹಿ.ವ್ಹಿ. ಸಾಲಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ.ಯಡ್ರಾಮಿ ಆಗಮಿಸಲಿದ್ದಾರೆ ಎಂದರು.

