ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶಕ್ಕೆ ಪ್ರಸ್ತುತ ಸಂದರ್ಭದಲ್ಲಿ ಬಾಯಿ ಮಾತಿನ ಘೋಷಣೆಗೆ ಸೀಮಿತಕ್ಕಿಂತ ರೈತರ ಸಂಕಷ್ಟಗಳಿಗೆ ಸ್ಪಂದಿಸಿ, ನೊಂದ ರೈತರ ಕಣ್ಣೀರು ಒರೆಸುವ ಪ್ರಧಾನಿ ಬೇಕಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.
ಶನಿವಾರ ರಾತ್ರಿ ಜಿಲ್ಲೆಯ ಬಬಲೇಶ್ವರ ತಾಲೂಕಿನ ಜೈನಾಪುರ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ದೇಶದ ರೈತರು ಕೆಲವೇ ವರ್ಷಗಳ ಹಿಂದೆ 370 ದಿನಕ್ಕೂ ಹೆಚ್ಚು ದಿನ ಹೋರಾಟ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಆದರೆ ಸಿದ್ಧರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಗುರ್ಲಾಪುರ ಕ್ರಾಸ್ ನಲ್ಲಿ ಕಬ್ಬು ಬೆಳೆಗಾರರು ಹೋರಾಟಕ್ಕಿಳಿದ ವಾರದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಡಲಾಯಿತು. ಇದರಿಂದ ದೇಶದ ಇತಿಹಾಸದಲ್ಲೇ ನಮ್ಮ ಸರ್ಕಾರ ರಾಜ್ಯದ ಕಬ್ಬು ಬೆಳೆಗಾರರಿಗೆ 200-350 ರೂ. ಹೆಚ್ಚಿನ ದರ ಕೊಡಿಸಿದೆ ಎಂದು ತಮ್ಮ ಸರ್ಕಾರದ ಸ್ಪಂದನೆಯನ್ನು ಬಣ್ಣಿಸಿದರು.
ಕೇಂದ್ರ ಸರ್ಕಾರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುತ್ತದೆ ಹೊರತು, ಖರೀದಿಗೆ ಮುಂದಾಗುವುದಿಲ್ಲ. ಮೆಕ್ಕೆಜೋಳಕ್ಕೆ 2400 ರೂ. ಘೋಷಿಸಿದರೂ ಖರೀದಿಗೆ ವ್ಯವಸ್ಥೆ ಮಾಡಲಿಲ್ಲ. ಹೀಗಾಗಿ ದೇಶಕ್ಕೆ ಬಾಯಿ ಮಾತಿನ ಭಾಷಣಕ್ಕಿಂಯ ರೈತರ ಭಾವನೆ ಅರಿತು ಅನುಷ್ಠಾನಕ್ಕೆ ತರುವ ಯೋಗ್ಯ ಪ್ರಧಾನಿ ಬೇಕಿದೆ ಎಂದು ವಿವರಿಸಿದರು.
ತೊಗರಿ, ಈರುಳ್ಳಿ, ಜೋಳ, ದ್ರಾಕ್ಷಿ ಹೀಗೆ ಏನೆ ಬೆಳೆ ಬೆಳೆದರೂ ರೈತರ ಬೆಳೆಗೆ ವೈಜ್ಞಾನಿಕ ದರ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ ಪ್ರಧಾನ ಭಾರತದಲ್ಲಿ ಶೇಕಡಾ 70 ಜನರಿಗೆ ಕೃಷಿ ಕ್ಷೇತ್ರವೇ ಉದ್ಯೋಗ ನೀಡಿದೆ. ಶೇ.3 ರಷ್ಟು ಮಾತ್ರ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ದೇಶದ ರೈತರ ಹಿತ ರಕ್ಷಣೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ದೇಶಕ್ಕೆ ಬಂದ ದುರ್ಗತಿ ಬರಲಿದೆ. ಅಷ್ಟೇ ಏಕೆ ಶತಮಾನಗಳ ಕಾಲ ನಮ್ಮನ್ನು ಆಳಿದ ಇಂಗ್ಲೆಂಡ್ ದೇಶದಲ್ಲೇ ಶೇ.3 ರಷ್ಟು ಜನರು ಮಾತ್ರ ಕೃಷಿಯಲ್ಲಿ ತೊಡಗಿದ್ದು, ಕೃಷಿ ಸಂಕಷ್ಟದ ದುಸ್ಥಿತಿ ಅನುಭವಿಸುತ್ತಿದೆ. ಹೀಗಾಗಿ ಕೃಷಿ ಹಾಗೂ ರೈತರಿಗೆ ಆದ್ಯತೆ ನೀಡದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲ ಎಂದು ಎಚ್ಚರಿಸಿದರು.
ದೇಶದಲ್ಲಿ 5 ಕೋಟಿ ರೈತರು ಕಬ್ಬು ಬೆಳೆಯುತ್ತಿದ್ದು, ಉತ್ತರ ಪ್ರದೇಶ, ಮಹಾರಾಷ್ಟ್ರ ಅತಿಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿವೆ. ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಈ ಕಾರಣದಿಂದ ಕರ್ನಾಟಕ ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿವೆ. ಆದರೆ ಕೇಂದ್ರ ಸರ್ಕಾರ ಸಕ್ಕರೆ ರಫ್ತಿಗೆ ಅವಕಾಶ ನೀಡುತ್ತಿಲ್ಲ, ಈ ಬಗ್ಗೆ ತ್ವರಿತ ಕ್ರಮವಾಗಬೇಕು. ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು.
ರೈತರು ಕೂಡ ಕಬ್ಬು ಬೆಳೆಗೆ ನೂರಿನ್ನೂರು ರೂ. ಬೇಡಿಕೆ ಇರಿಸಿ ಹೋರಾಡ ಮಾಡುವ ಬದಲು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಪ್ರಗತಿಪರ ರೈತರಂತೆ 100-120 ಟನ್ ಕಬ್ಬು ಉತ್ಪಾದಿಸುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯದಲ್ಲಿ ಸರ್ಕಾರ ರೈತರಿಗೆ ನೀರು, ವಿದ್ಯುತ್ ಉಚಿತ ನೀಡುವ ಜೊತಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ ಪೂರೈಸುತ್ತಿದೆ. ಹೀಗಾಗಿ ರೈತರು ಸರ್ಕಾರ ನೀಡುವ ಸೌಲಭ್ಯಗಳ ಸದ್ಬಳಕೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯದಲ್ಲೇ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ಕೇಂದ್ರ ಸಹಕಾರಿ ಬ್ಯಾಂಕುಗಳು ಲಕ್ಷಾಂತರ ರೂ. ಸಾಲ ನೀಡುವ ಮೂಲಕ ರೈತರ ಹಿತ ರಕ್ಷಣೆ ಮಾಡುತ್ತಿವೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಸಾಲ ನೀಡುವಷ್ಟು ಆರ್ಥಿಕ ಶಕ್ತಿ ಬರಲಿ ಎಂದು ಹಾರೈಸಿದರು.
ಜೈನಾಪುರ ಗ್ರಾಮದಲ್ಲಿ ನನ್ನ ಬಾಂಧವ್ಯದ ಬೇರು ಇದೆ
ನಾನು ತಿಕೋಟಾ ಕ್ಷೇತ್ರದಿಂದ ಶಾಸಕನಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದೆ, ಆಗ ನನ್ನ ಆಯ್ಕೆಯಲ್ಲಿ ಜೈನಾಪುರ ಗ್ರಾಮಸ್ಥರ ಕೊಡುಗೆ ಪ್ರಮುಖ ಕಾರಣವಾಗಿತ್ತು. ಹೀಗಾಗಿ
ನನ್ನ ರಾಜಕೀಯ ಸುದೀರ್ಘ ಹಾದಿಯಲ್ಲಿ ಜೈನಾಪುರ ಗ್ರಾಮದಲ್ಲಿ ನನ್ನ ಬಾಂಧವ್ಯದ ಬೇರು ಇದೆ ಎಂದು ಸಚಿವರಾದ ಶಿವಾನಂದ ಪಾಟೀಲ ಸ್ಮರಿಸಿದರು.
ಆಲಮೇಲದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಿದ್ದಣ್ಣ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಜಿ.ಪಂ. ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಗಿರೀಶ ಕೋರಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಭುಸ್ವಾಮೀ ಹಿರೇಮಠ ಪ್ರಸ್ತಾವಿಕ ಮಾತನಾಡಿದರು. ಕಿರಣ ಹುದ್ದಾರ ಸ್ವಾಗತಿಸಿದರೆ, ಗುರು ಬೆಳ್ಳುಬ್ಬಿ ವಂದಿಸಿದರು
ತುಲಾಭಾರ ನಿರಾಕರಿಸಿದ ಸಚಿವ ಶಿವಾನಂದ
ಇದೇ ವೇಳೆ ಕಬ್ಬು ಬೆಳೆಗೆ ಐತಿಹಾಸಿಕ ದರ ನಿಗದಿ ಮಾಡಿದ ಕಾರಣ ರೈತರು ಸಚಿವ ಶಿವಾನಂದ ಪಾಟೀಲ ಅವರಿಗೆ ತುಲಾಭಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ತಾವು ತುಲಾಭಾರ ಮಾಡಿಸಿಕೊಳ್ಳಲು ನಿರಾಕರಿಸಿದ ಸಚಿವರು, ಕಬ್ಬು ಬೆಳೆಗಾರರ ಸಂಘಟನೆ ಮಾಡಿರುವ ಸಮೀರವಾಡಿಯ ರಾಮನಗೌಡ ಪಾಟೀಲ ಅವರಿಗೆ ತುಲಾಭಾರ ನೆರವೇರಿಸಿದರು. ಆ ಮೂಲಕ ತಮಗೆ ಸಲ್ಲಬೇಕಿದ್ದ ಗೌರವವನ್ನು ಅನ್ನದಾತರಿಗೆ ಸಮರ್ಪಿಸಿದರು.
.

