ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಅಧಿಕಾರಿಗಳು ಅಭಿವೃದ್ಧಿ ಕಾಮಗಾರಿಗಳ ಕೆಲಸವನ್ನು ನಡೆಸುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಜಮಖಂಡಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಸಾವಳಗಿ ತುಬಚಿ ರಸ್ತೆ ಕಾಮಗಾರಿಯು ಜಿಲ್ಲಾ ಪಂಚಾಯತ ಅಡಿಯಲ್ಲಿ 10 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಹಾಗೂ ಸಾವಳಗಿ ಸಮೀಪದ ಕಾಜಿಬೀಳಗಿ ಗ್ರಾಮದಲ್ಲಿ ಕಾಜಿಬೀಳಗಿ-ಹಾಲಳ್ಳಿ ಜಿಲ್ಲಾ ಮುಖ್ಯ ರಸ್ತೆ 0.35 ರಿಂದ 1.80 ವರೆಗೆ 211.65 ಲಕ್ಷದ ಕಾಮಗಾರಿಗೆ ಜಮಖಂಡಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಸಾವಳಗಿ ತುಬಚಿ ರಸ್ತೆ ಕಾಮಗಾರಿ 2 ಕಿ ಮೀ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ, ಗ್ರಾಮದ ಬಹುದಿನಗಳ ಬೇಡಿಕೆಗೆ ಇಂದು ಈ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು, ಹಾಗೂ ಕಾಜಿಬೀಳಗಿ ಹಾಲಳ್ಳಿ ರಸ್ತೆಗೂ ಭೂಮಿ ಪೂಜೆ ನೆರವೇರಿಸಿದ್ದು ಆದಷ್ಟು ಬೇಗ ಈ ರಸ್ತೆ ಕಾಮಗಾರಿ ಪ್ರಾರಂಭವಾಗಲಿದೆ, ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ರಸ್ತೆ ನಿರ್ಮಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂಜು ಮಾಳಿ, ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಪರಮಗೌಡ, ಜಿಲ್ಲಾ ಪಂಚಾಯತ ಅಧಿಕಾರಿಗಳು, ಇಂಜಿನಿಯರ, ಹಾಗೂ ಗ್ರಾಮದ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷ, ಸದಸ್ಯರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ಸಾವಳಗಿ – ತುಬಚಿ ರಸ್ತೆ ಕಾಮಗಾರಿಯು ಎಷ್ಟು ಅಳತೆ ಇದೆ ಎಂಬುದು ಪರಿಶೀಲನೆ ಮಾಡಬೇಕು, ಇಂಜಿನಿಯರ ಅವರಿಗೆ ಎಷ್ಟು ಅಳತೆ ಇದೆ ಎಂಬುದು ಗೋತ್ತಿಲ್ಲ, ರಸ್ತೆ ಸಂಪೂರ್ಣ ಅಳತೆ ಮಾಡಿ ರಸ್ತೆಯ ಸರಹದ್ದು ಗುರುತಿಸಿ ನಂತರ ರಸ್ತೆಯ ಕಾಮಗಾರಿ ಮಾಡಿ, ಹಾಗೂ ಚರಂಡಿ ವ್ಯವಸ್ಥೆಯು ಸಹ ಅರ್ಧಕ್ಕೆ ನಿಂತಿದೆ ಅದಕ್ಕೆ ಸಂಬಂಧಿಸಿದ ಇಂಜನಿಯರ ಅವರನ್ನು ಕರೆದು ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ಗುಣಮಟ್ಟದ ರಸ್ತೆ ಮಾಡಬೇಕು, ಈ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತವೆ, ಆದಷ್ಟು ಬೇಗ ರಸ್ತೆ ಕಾಮಗಾರಿ ಮಾಡಿ”
– ಉಮೇಶ್ ಜಾಧವ
ಗ್ರಾಮಸ್ಥರು, ಸಾವಳಗಿ

