ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾಮಧೇನು ಕಲ್ಪವೃಕ್ಷವಾಗಿರುವ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಸ್ಮರಣೆ ಮಾಡಲು ಪೂರ್ವ ಜನ್ಮದ ಪುಣ್ಯ ಮಾಡಿರಬೇಕು ಎಂದು ಗುರು ರಾಘವೇಂದ್ರ ಸೇವಾ ಸಮಿತಿಯ ಪ್ರಮುಖ ಪ್ರಕಾಶ ಅಕ್ಕಲಕೋಟ ಹೇಳಿದರು.
ಗ್ರಾಮದ ಶಿರಡಿ ಸಾಯಿಬಾಬಾ ಮಂದಿರದ ಆವರಣದಲ್ಲಿ ವಿಜಯಪುರದ ಗುರು ರಾಘವೇಂದ್ರ ಸೇವಾ ಸಮಿತಿಯಿಂದ ಮಂತ್ರಾಲಯ ಪಾದಯಾತ್ರೆ ಹೊರಡುವ ಭಕ್ತಾದಿಗಳಿಗೆ ದಾಸೋಹ ಸೇವೆ ಮಾಡುತ್ತಿರುವ ನಿಮಿತ್ತ ನಡೆದ ೨೫ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಅವಳಿ ಜಿಲ್ಲೆಯ ಸಾಕಷ್ಟು ಭಕ್ತರು ಯಲಗೂರಿನಿಂದ ಹುಲ್ಲೂರು, ಮುದ್ದೇಬಿಹಾಳ ಮಾರ್ಗವಾಗಿ ಮಂತ್ರಾಲಯಕ್ಕೆ ಪಾದಯಾತ್ರೆ ಬೆಳೆಸುತ್ತಾರೆ. ಯಲಗೂರಿನಿಂದ ಮುದ್ದೇಬಿಹಾಳದವರೆಗಿನ ೨೫ ಕಿಮೀ ಅಂತರದಲ್ಲಿ ಪಾದಯಾತ್ರಿಗಳಿಗೆ ಯಾವುದೇ ಸೌಲಭ್ಯವಿರಲಿಲ್ಲ. ಇದರಿಂದ ಪಾದಯಾತ್ರಿಕರು ಪ್ರಯಾಸ ಪಡುತ್ತಿದ್ದರು. ಇದನ್ನು ತಪ್ಪಿಸಲು ಮಧ್ಯವರ್ತಿ ಸ್ಥಳವಾದ ಹುಲ್ಲೂರು ಬಸ್ ನಿಲ್ದಾಣದ ಬಳಿ ಗುರು ರಾಘವೇಂದ್ರ ಸೇವಾ ಸಮಿತಿಯಿಂದ ೨೦೦೧ರಿಂದ ದಾಸೋಹ ಸೇವೆ ಆರಂಭಿಸಲಾಗಿದ್ದು ನಿರಂತರವಾಗಿ ನಡೆದುಕೊಂಡು ಬಂದಿದೆ. ರಾಯರ ಕೃಪೆಯಿಂದ ನಮಗೆಲ್ಲ ಒಳ್ಳೆಯದಾಗಿದೆ ಎಂದರು.
ಗೋಪಾಲಾಚಾರ್ಯ ಹಿಪ್ಪರಗಿ ಮಾತನಾಡಿ, ಪಾದಯಾತ್ರಿಕರ ಕಷ್ಟಗಳನ್ನು ಅರಿತು ದಾಸೋಹ ಸೇವೆ ಆರಂಭಿಸಿದ ಗುರು ರಾಘವೇಂದ್ರ ಸೇವಾ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷರಾದ ವೆಂಕಟೇಶ್ ಜೋಶಿ, ವೈ.ಕೆ.ಹಳೇಮನಿ, ಪ್ರಮೋದ ಚಿಂತಾಮಣಿ, ಬದರಿಆಚಾರ್ಯ ಚಿಮ್ಮಲಗಿ, ಗೋವಿಂದ ಜೋಶಿ, ದತ್ತಾ ಜೋಶಿ, ಗುರುರಾಜರಾವ್, ಸಂತೋಷ ಕುಲಕರ್ಣಿ, ಸಂತೋಷ ಬಿರಾದಾರ, ಶಿವಾಜಿ ಪಾಟೀಲ, ಸಂಜು ದಿವಾನಜಿ, ಜಯತೀರ್ಥ ಮಂಗಲಗಿ, ರಾಕೇಶ ಕುಲಕರ್ಣಿ, ಗಿರೀಶ ಕುಲಕರ್ಣಿ, ವೆಂಕಟೇಶ ಗುಡಿ, ಪ್ರಶಾಂತರಾವ್ ಪದಕಿ, ವಿಜಯ ಜೋಶಿ ಸೇರಿದಂತೆ ಸಮಿತಿಯ ಸದಸ್ಯರಿದ್ದರು.

