ಉದಯರಶ್ಮಿ ದಿನಪತ್ರಿಕೆ
ಸಿಂದಗಿ:ಭಾರತದಲ್ಲಿರುವ ಯುವ ಸಮೂಹ ಭಾರತ ದೇಶದ ಬೆಳೆವಣಿಗೆಯಲ್ಲಿ ಬಹುಮುಖ್ಯವಾದ ಪಾತ್ರ ವಹಿಸುತ್ತದೆ. ಒಬ್ಬ ವಿದ್ಯಾರ್ಥಿ ಬೆಳವಣಿಗೆ ಗಣಿತ ಅಷ್ಟೇ ಮುಖ್ಯ ಅಲ್ಲ. ಅದರ ಜೊತೆಗೆ ಸಂಸ್ಕಾರಯುತ ಮನೋಭಾವ ಇರಬೇಕು ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪುರ ಹೇಳಿದರು.
ಸಿಂದಗಿ ಪಟ್ಟಣದ ಕಲಕೇರಿ ರಸ್ತೆಯ ಹೊರ ವಲಯದಲ್ಲಿರುವ ಎಲೈಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ಎಲೈಟ್ ಯುವೋತ್ಸವ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹಸಿರು ಕ್ರಾಂತಿಯು ಭಾರತದಂತಹ ದೇಶಗಳಲ್ಲಿ ಆಹಾರ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿ, ದೇಶವನ್ನು ಆಹಾರ ಧಾನ್ಯಗಳಲ್ಲಿ ಸ್ವಾವಲಂಬಿಯನ್ನಾಗಿಸಿದೆ, ಹಸಿವು ನೀಗಿಸಿದೆ, ರೈತರ ಆದಾಯ ಹೆಚ್ಚಿಸಿದೆ ಮತ್ತು ಕೃಷಿಯನ್ನು ಆಧುನಿಕ ಕೈಗಾರಿಕಾ ಪದ್ಧತಿಯಾಗಿ ಪರಿವರ್ತಿಸಿದೆ. ಬದ್ಧತೆಯೇ ಕಾಲೇಜುಗಳಿಗೆ ಶ್ರೀರಕ್ಷೆ. ಸಿಂದಗಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಎಲೈಟ್ ಸಹ ಒಂದು. ಜಗತ್ತಿನ ಆರ್ಥಿಕತೆಗೆ ಬಹು ದೊಡ್ಡ ಶಕ್ತಿ ಎಂದರೆ ಭಾರತ. ಇದಕ್ಕೆ ಕಾರಣ ಯುವ ಶಕ್ತಿ ಎಂದರು.
ಈ ವೇಳೆ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಪಿ.ಎಸ್.ಐ ಆರೀಫ್ ಮುಷಾಪುರಿ ಮಾತನಾಡಿ, ಓದಿನಲ್ಲಿ ಅಂದಿಗೂ ಇಂದಿಗೂ ಬಹಳಷ್ಟು ವ್ಯತ್ಯಾಸವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಎಂಬ ಗಿಳಿಗೆ ಮಾರು ಹೋಗಿ ಅಧ್ಯಯನದಲ್ಲಿ ಹಿಂದೆ ಬಿಳುತ್ತಿದ್ದಾರೆ. ಹಾಗಾಗಿ ಮಕ್ಕಳು ಓದಿನೆಡೆಗೆ ಹೆಚ್ಚಿನ ಗಮನ ಹರಿಸಿದರೆ ಸಾಧನೆಯ ಶಿಖರ ಎರಲು ಸಾಧ್ಯ.ಸಾಧನೆ ಮಾಡಲು ವಿದ್ಯಾರ್ಥಿಗಳಲ್ಲಿ ಛಲ ಎನ್ನುವುದು ಇರಬೇಕು. ಪಾಲಕರು ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಕಡೆಗೂ ಗಮನ ಹರಿಸಬೇಕು. ಮಕ್ಕಳಿಗೆ ಓದು ಓದು ಎಂದು ಒತ್ತಡ ಹಾಕುವ ಜೊತೆಗೆ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಕಾರ್ಯ ಮಾಡಬೇಕು. ಗುರು ಹಿರಿಯರಿಗೆ ಗೌರವ ನೀಡುವ ಮನೋಭಾವ ಬೆಳೆಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಮಹಬುಬ್ಬಿ ಅಸಂತಾಪುರ, ಮುಸ್ತಪಾ ಅಸಂತಾಪುರ, ಪ್ರಾಚಾರ್ಯ ಇಜಾಜ್ ಅಹ್ಮದ ಜುಮನಾಳ, ಮುಖ್ಯಗುರು ತೌಶಿಫ್ ಕೆಂಭಾವಿ, ನಿಟ್ ಅಕಾಡೆಮಿಯ ಸಂಯೋಜಕ ಅಜೀಮ್ ನಾಯ್ಕ್, ಮನ್ಸೂರ ಅಸಂತಾಪುರ, ರೇವಣಸಿದ್ಧ ಗುಣಾರಿ, ಭಾಗ್ಯಲಕ್ಷ್ಮಿ ಕೆಂಭಾವಿ, ರೇಣುಕಾ ಮೋಪಗಾರ, ಅವಿನಾಶ ಸೇರಿದಂತೆ ಶಾಲಾ ಕಾಲೇಜಿನ ಭೋದಕ ಸಿಬ್ಬಂದಿಗಳು, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಈ ವೇಳೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಸಿಂದಗಿ ಗಣಿತ ಲೋಕದ ಭೀಷ್ಮ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ ಎಚ್.ಟಿ.ಕುಲಕರ್ಣಿ ಗುರುಗಳು ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಂಸ್ಥೆಯ ಸಂಸ್ಥಾಪಕ, ಆಡಳಿತಾಧಿಕಾರಿ ಮಹಿಬೂಬ್ ಅಸಂತಾಪುರ ಪ್ರಾಸ್ತಾವಿಕ ಮಾತನಾಡಿದರು. ಗುರುರಾಜ ದೇಸಾಯಿ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕ ಅಶೋಕ ಬಿರಾದಾರ ನಿರೂಪಿಸಿ ವಂದಿಸಿದರು

