ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮೇಲ್ವಿಚಾರಕ ವಿಶ್ವನಾಥ ಸದಲಗೆ ಹೇಳಿದರು.
ಪಟ್ಟಣದ ಹೊಸನಗರದ ವಿಠ್ಠಲ ರುಕ್ಮಿಣಿ ಮಂಗಲ ಭವನದಲ್ಲಿ ಇತ್ತೀಚೆಗೆ ಜರುಗಿದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದಿ:೨೦ ರಂದು ಮಂಗಳವಾರ ಬೆಳಿಗ್ಗೆ ೯ ಗಂಟೆಗೆ ಪೂಜೆ ಆರಂಭಗೊಂಡು ನಂತರ ಧಾರ್ಮಿಕಸಭಾ ಜರುಗಲಿದೆ. ಇದರಲ್ಲಿ ಪಟ್ಟಣದ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಜಾಲವಾದ ವಲಯ ಮೇಲ್ವಿಚಾರಕ ಸದಾಶಿವಪ್ಪ ಅಂಗಡಿ ಮಾತನಾಡಿ, ಧಾರ್ಮಿಕ ಸಭೆ ಸೇರಿದಂತೆ ಎಲ್ಲ ಪ್ರಾಪಂಚಿಕ ಪ್ರಗತಿದಾಯಕ ಕಾರ್ಯಗಳಲ್ಲಿ ಹತ್ತು ಮನಸ್ಸುಗಳು ಒಂದಾಗಿ ಆತ್ಮೀಯತೆಯಿಂದ ದುಡಿದಲ್ಲಿ ಆರ್ಥಿಕ ಸ್ವಾವಲಂಬನೆಯೊಂದಿಗೆ ಸರ್ವತೋಮುಖ ಅಭಿವೃದ್ಧಿ ಸುಲಭ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಪೂಜಾ ವ್ಯವಸ್ಥಾಪನಾ ಸಮಿತಿ ರಚಿಸಿ ವಿವಿಧ ಜವಾಬ್ದಾರಿಗಳನ್ನು ಹಂಚಲಾಯಿತು.
ಸಮಿತಿ ಅಧ್ಯಕ್ಷ ಈರಣ್ಣ ಒಂಟೆತ್ತಿನ, ಗೌರವ ಅಧ್ಯಕ್ಷರುಗಳಾದ ಗೊಲ್ಲಾಳಪ್ಪ ಚೌಧರಿ, ಪಿ.ಎಸ್.ಮಿಂಚನಾಳ, ಉಪಾಧ್ಯಕ್ಷರುಗಳಾದ ಈರಪ್ಪ ಉಪಳಾಯಿ, ಶಂಕರಗೌಡ ಪಾಟೀಲ, ಸಲಹೆಗಾರರಾದ ಸಿ.ಕೆ.ಕುದರಿ, ಹಸನ್ ನದಾಫ್, ಸಹಕಾರ್ಯದರ್ಶಿ ಪಿ.ಜಿ.ಹಿರೇಮಠ, ಸೋಮು ದೇವೂರ ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಇದ್ದರು.

