ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿ, ಅಂಕಗಳಿಕೆ ಎಂಬುದು ಉದ್ಯೋಗದ ಭಾಗವಷ್ಟೇ, ಸಚ್ಚಾರಿತ್ರ್ಯದ ಸನ್ಮಾರ್ಗ ತೋರುವುದೇ ಶಿಕ್ಷಣದ ಅಂತಿಮ ಗುರಿಯಾಗಬೇಕು ಎಂದು ಉಪನ್ಯಾಸಕ ಡಾ.ಯಂಕನಗೌಡ ಎಸ್ ಪಾಟೀಲ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ 164 ನೇ ಜಯಂತೋತ್ಸವ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸತ್ಪ್ರಜೆಗಳಾಗಿ ಬಾಳಲು ಸಾಧ್ಯ ಎಂದವರು. “ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ” ಎಂಬಂತೆ ಪತ್ನಿ ಮತ್ತು ಪತಿಯರು ಒಂದಾಗಿ, ಶಿಕ್ಷಣ ಸಂಸ್ಥೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಮುಖ್ಯ ಶಿಕ್ಷಕ ಬಾಬು ಪಟೇಲ್ ಯಲ್ಗೋಡ ಹಾಗೂ ಅವರ ಧರ್ಮಪತ್ನಿ ಮಾಸಾಬಿ ಯಲ್ಗೋಡ ಇವರ ಮಹಾನ್ ಕಾರ್ಯಕ್ಕೆ ಸಾಥ್ ನೀಡುತ್ತಿರುವ ಆಡಳಿತ ಮಂಡಳಿಯ ಸರ್ವ ಸದಸ್ಯರ ಕಾರ್ಯ ನಿಜಕ್ಕೂ ಶ್ಲಾಘನೀಯ, ಕಳೆದ ಮೂರು ದಶಕಗಳಿಂದ ನೂರಾರು ವಿದ್ಯಾರ್ಥಿಗಳ ಬಾಳಲಿ ಜ್ಞಾನ ದೀವಿಗೆ ಹೊತ್ತಿಸಿ ಬಡ ಮಕ್ಕಳ ಪಾಲಿಗೆ ಆಶಾಕಿರಣವಾದ ಈ ಶಿಕ್ಷಣ ಸಂಸ್ಥೆ ಮುಂಬರುವ ದಿನಗಳಲ್ಲಿ ಪ್ರೌಢಶಾಲೆ ಆರಂಭಿಸುವ ಮೂಲಕ ಗ್ರಾಮೀಣ ಪ್ರತಿಭೆಗಳ ಉನ್ನತ ವ್ಯಾಸಂಗಕ್ಕೆ ಮುಂದಾಗಲಿ ಎಂದು ಕರೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಬಾಬು ಪಟೇಲ್ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ನಡೆಯುತ್ತಿರುವ ನಮ್ಮ ಸಂಸ್ಥೆಯು ಕೇವಲ ಅಕ್ಷರ ಕಲಿಸದೆ ಸಂಸ್ಕಾರವನ್ನು ಕಲಿಸುತ್ತಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಇಂದು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿರುವುದು ನಮ್ಮ ಶ್ರಮಕ್ಕೆ ಸಂದ ಗೌರವ ಎಂದರು.
ವಿವೇಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪುಟ್ಟ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡಿತು.
ಇದೇ ಸಂದರ್ಭದಲ್ಲಿ ಪಿಯುಸಿ ಕಾಲೇಜು ಉಪನ್ಯಾಸಕ ರಾಮಣ್ಣ ಪಾಟೀಲ, ಶಿಕ್ಷಕಿ ಸಾನಿಯಾ ನಾಲತವಾಡ ಇವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಆದಿತ್ಯಗೌಡ ಪೊಲೀಸ್ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಮುಖರಾದ ಉಪಾಧ್ಯಕ್ಷ ಬಂದೇನವಾಜ್ ನಾಲತವಾಡ, ಗಂಗಾಧರ ಪತ್ತಾರ, ಇಲಿಯಾಸ್ ನಾಲತವಾಡ, ತಾಹೇರ ಹುಸೇನ್, ಪತ್ರಕರ್ತ ಇಲಿಯಾಸ್ ಪಟೇಲ್, ಮೌಲಾನ ಗೌಸ್ಪಾಕ್, ಶಿಕ್ಷಕಿಯರಾದ ಮಧುಮತಿ, ಅಕ್ಷತಾ, ಮಿಜಬಾ, ಮದೀನಾ, ಭಾರತಿ ಸೇರಿದಂತೆ ವಿದ್ಯಾರ್ಥಿಗಳು ಪಾಲಕ ಪೋಷಕರು ಉಪಸ್ಥಿತರಿದ್ದರು.

