ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಜ್ಞಾನವಿಕಾಸ ಕೇಂದ್ರದಲ್ಲಿ ಸುಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಹೊಲಿಗೆ ತರಬೇತಿಯಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸೋಮನಗೌಡ(ಅಪ್ಪುಗೌಡ) ಪಾಟೀಲ ಮಾತನಾಡಿ, ಸುಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ತಾಲೂಕು ಘಟಕವು ಉಚಿತವಾಗಿ ಮಹಿಳೆಯರಿಗೆ ಮೂರು ತಿಂಗಳ ತರಬೇತಿ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಲ್ಲಿ ತರಬೇತಿ ಪಡೆದುಕೊಂಡಿರುವ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಪೂರಕವಾಗಿದೆ. ಇಂತಹ ತರಬೇತಿಗಳು ಆರ್ಥಿಕ ಸಬಲೀಕರಣ ಹೊಂದಲು ಅನುಕೂಲವಾಗುತ್ತವೆ ಎಂದರು.
ಧರ್ಮಸ್ಥಳ ಸಂಸ್ಥೆಯ ಮನಗೂಳಿ ವಲಯದ ಮೇಲ್ವಿಚಾರಕಿ ಶೋಭಾ ಮಾತನಾಡಿ, ನಮ್ಮ ಸಂಸ್ಥೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ಸ್ವ-ಉದ್ಯೋಗ ಪ್ರೇರಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಹಿರಿದು. ಇಲ್ಲಿ ತರಬೇತಿ ಪಡೆದ ಮಹಿಳೆಯರು ತಮ್ಮ ಕಲಿಕಾ ಮಟ್ಟ ನಿತ್ಯ ನಿರಂತರವಾಗಿಸಿ ಹೊಲಿಗೆ ತರಬೇತಿಯನ್ನು ಉದ್ಯೋಗ ಮಾಡಿಕೊಳ್ಳಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಅಮ್ಮ ಹೇಮಾವತಿ ಹೆಗ್ಗಡೆ ಅವರು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕೆಂಬ ಆಶಯ ಹೊಂದಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಭಾಗ್ಯರಾಜ ಸೊನ್ನದ ಮಾತನಾಡಿದರು.
ಈ ತರಬೇತಿ ಪಡೆದುಕೊಂಡ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಂಗೀತಾ, ಆಡಿಟರ ರೋಜಾ, ಹೊಲಿಗೆ ತರಬೇತಿ ಶಿಕ್ಷಕಿ ಸಾಲಿಮ್ಮ್, ಸೇವಾಪ್ರತಿನಿಧಿಗಳು,ತರಬೇತಿ ಪಡೆದ ಸದಸ್ಯರು ಇದ್ದರು.

